ಪತಿಯ ಜೀವ ಉಳಿಸಲು ʼಲಿವರ್ʼ ದಾನ ಮಾಡಿದ ಪತ್ನಿ; ಶಸ್ತ್ರ ಚಿಕಿತ್ಸೆ ಬಳಿಕ ಇಬ್ಬರೂ ಮೃತ್ಯು

ಮೃತಪಟ್ಟ ದಂಪತಿ (Photo credit: NDTV)
ಪುಣೆ: ಪತಿಯ ಜೀವ ಉಳಿಸಲು ಪತ್ನಿ ತನ್ನ ಯಕೃತ್ತಿನ (ಲಿವರ್) ಒಂದು ಭಾಗವನ್ನು ದಾನ ಮಾಡಿದ್ದರು. ಆದರೆ, ಈ ಕಸಿ ಶಸ್ತ್ರಚಿಕಿತ್ಸೆಯ ಬಳಿಕ ಪತಿ ಮೃತಪಟ್ಟಿದ್ದು, ಅಂಗಾಂಗ ದಾನ ಮಾಡಿದ ಪತ್ನಿ ಕೂಡಾ ಕೆಲ ದಿನಗಳ ಬಳಿಕ ಮೃತಪಟ್ಟಿರುವ ಘಟನೆ ಪುಣೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಆರೋಗ್ಯ ಇಲಾಖೆಯು ಆಸ್ಪತ್ರೆಗೆ ನೋಟಿಸ್ ಜಾರಿಗೊಳಿಸಿದೆ.
ಯಕೃತ್ ವೈಫಲ್ಯದಿಂದ ಬಳಲುತ್ತಿದ್ದ ಬಾಪು ಕುಮಾರ್ ಎಂಬವರಿಗೆ ಅವರ ಪತ್ನಿ ಕಾಮಿನಿ ಎಂಬವರು ಯಕೃತ್ ದಾನ ಮಾಡಿದ್ದರು. ಆ. 15ರಂದು ಬಾಪು ಕುಮಾರ್ ಅವರಿಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನೆರವೇರಿತ್ತು. ಆದರೆ, ಅವರು ಆಗಸ್ಟ್ 17ರಂದು ಮೃತಪಟ್ಟಿದ್ದರು. ಇದರ ಬೆನ್ನಿಗೇ, ಆಗಸ್ಟ್ 21ರ ವೇಳೆಗೆ ಕಾಮಿನಿ ಅವರಿಗೆ ಯಕೃತ್ತಿನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಸೋಂಕಿಗೆ ಚಿಕಿತ್ಸೆ ಪಡೆಯವಾಗಲೇ ಅವರೂ ಕೂಡಾ ಮೃತಪಟ್ಟಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಮೃತರ ಕುಟುಂಬದ ಸದಸ್ಯರು, ತನಿಖೆಗಾಗಿ ಆಗ್ರಹಿಸಿದ್ದಾರೆ.
ಕುಟುಂಬಸ್ಥರ ದೂರಿನ ಅನ್ವಯ, ಆರೋಗ್ಯ ಇಲಾಖೆ ಆಸ್ಪತ್ರೆಗೆ ನೋಟಿಸ್ ನೀಡಿದ್ದು, ಕಸಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಹಂಚಿಕೊಳ್ಳುವಂತೆ ಸೂಚಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಆಡಳಿತ ಮಂಡಳಿ, “ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಪ್ರಮಾಣಿತ ವೈದ್ಯಕೀಯ ಶಿಷ್ಟಾಚಾರಗಳ ಪ್ರಕಾರವೇ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗಿದೆ. ಅಲ್ಲದೆ, ಬಾಪು ಕುಮಾರ್ ಅವರಿಗೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿದ್ದವು. ಶಸ್ತ್ರಚಿಕಿತ್ಸೆಯ ನಂತರ, ಹೃದಯಾಘಾತಕ್ಕೀಡಾಗಿ ಅವರು ಮೃತಪಟ್ಟಿದ್ದಾರೆ. ಇನ್ನು ಕಾಮಿನಿ ಅವರು ಉತ್ತಮವಾಗಿಯೇ ಚೇತರಿಸಿಕೊಂಡಿದ್ದರು. ಆದರೆ, ಕೆಲ ದಿನಗಳ ನಂತರ ಅವರಲ್ಲಿ ಸೋಂಕು ಹಾಗೂ ಬಹು ಅಂಗಾಂಗ ವೈಫಲ್ಯ ಕಾಣಿಸಿಕೊಂಡಿದ್ದು, ಅದನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬಾಪು ಕುಮಾರ್ ಕುಟುಂಬಕ್ಕಾದ ನಷ್ಟಕ್ಕಾಗಿ ನಾವು ವಿಷಾದಿಸುತ್ತೇವೆ” ಎಂದು ಸಂತಾಪ ವ್ಯಕ್ತಪಡಿಸಿದೆ.







