ರಸ್ತೆಯಲ್ಲಿ ಬಿಟ್ಟು ಹೋಗಿದ್ದ 3 ದಿನದ ಮಗುವನ್ನು ದತ್ತು ಪಡೆದ ಮಹಿಳೆ: 13ನೇ ವಯಸ್ಸಿಗೆ ಸ್ನೇಹಿತರ ಜೊತೆ ಸೇರಿ ಆಕೆಯನ್ನು ಕೊಲೆ ಮಾಡಿದ ಬಾಲಕಿ!

PC : .ndtv.com
ಹೊಸದಿಲ್ಲಿ: ಒಡಿಶಾದಲ್ಲಿ ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದ ಮಗುವನ್ನು ಮಹಿಳೆಯೊಬ್ಬರು ದತ್ತು ಪಡೆದಿದ್ದರು. ಆದರೆ, ಅದೇ ಮಗು ಬೆಳೆದು ದೊಡ್ಡವಳಾಗಿ 13ನೇ ವಯಸ್ಸಿಗೆ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ದತ್ತು ತಾಯಿಯನ್ನು ಕೊಲೆ ಮಾಡಿದ್ದಾಳೆ.
ರಾಜಲಕ್ಷ್ಮಿ(54) ಕೊಲೆಯಾದವರು. ಎಪ್ರಿಲ್ 29ರಂದು ಗಜಪತಿ ಜಿಲ್ಲೆಯ ಪರಲಖೆಮುಂಡಿ ಪಟ್ಟಣದಲ್ಲಿರುವ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, 13ರ ಹರೆಯದ 8ನೇ ತರಗತಿಯ ವಿದ್ಯಾರ್ಥಿನಿ ತನ್ನ ಇಬ್ಬರು ಪ್ರಿಯಕರರ ಜೊತೆ ಸೇರಿಕೊಂಡು ದತ್ತು ತಾಯಿಯನ್ನು ಕೊಲೆ ಮಾಡಿದ್ದಾಳೆ. ತನ್ನ ಅಕ್ರಮ ಸಂಬಂಧಕ್ಕೆ ದತ್ತು ತಾಯಿಯ ವಿರೋಧ ಮತ್ತು ಆಕೆಯ ಆಸ್ತಿಯ ಮೇಲಿನ ವ್ಯಾಮೋಹದಿಂದ ಕೃತ್ಯವನ್ನು ಎಸಗಿದ್ದಾಳೆ.
ರಾಜಲಕ್ಷ್ಮಿಗೆ ನಿದ್ರೆ ಮಾತ್ರೆಗಳನ್ನು ನೀಡಿ ದಿಂಬುಗಳಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಆಕೆಯ ಮೃತದೇಹವನ್ನು ಭುವನೇಶ್ವರದಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೊದಲಿಗೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಲಾಗಿತ್ತು. ಆದರೆ ಆ ಬಳಿಕ ಅಸಲಿಯತ್ತು ಬಯಲಾಗಿದೆ.
ಕೊಲೆ ಕೃತ್ಯ ಬಯಲಾಗಿದ್ದೇಗೆ?:
ರಾಜಲಕ್ಷ್ಮಿಯ ನಿಧನದ ಎರಡು ವಾರಗಳ ಬಳಿಕ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಬಾಲಕಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. ಆಕೆ ಇನ್ಸ್ಟಾಗ್ರಾಮ್ನಲ್ಲಿ ದತ್ತು ತಾಯಿಯನ್ನು ಕೊಲೆ ಮಾಡಿ ಚಿನ್ನಾಭರಣಗಳು ಮತ್ತು ಹಣವನ್ನು ಸ್ವಾಧೀನ ಪಡಿಕೊಳ್ಳುವ ಕುರಿತು ಸ್ನೇಹಿತರ ಜೊತೆ ಸಂಭಾಷಣೆ ನಡೆಸಿರುವುದು ಅದರಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಮಿಶ್ರಾ ಮೇ 14 ರಂದು ಪರಲಖೆಮುಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರದ ತನಿಖೆಯಲ್ಲಿ ಬಾಲಕಿ, ಆಕೆಯ ಸ್ನೇಹಿತರಾದ ದೇವಸ್ಥಾನದ ಅರ್ಚಕ ಗಣೇಶ್ ರಥ್ (21) ಮತ್ತು ದಿನೇಶ್ ಸಾಹು (20) ಎಂಬಾತನನ್ನು ಬಂಧಿಸಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಗಜಪತಿ ಪೊಲೀಸ್ ವರಿಷ್ಠಾಧಿಕಾರಿ ಜತೀಂದ್ರ ಕುಮಾರ್ ಪಾಂಡಾ, ರಾಜಲಕ್ಷ್ಮಿ ಮತ್ತು ಅವರ ಪತಿ ಸುಮಾರು 13 ವರ್ಷಗಳ ಹಿಂದೆ ಭುವನೇಶ್ವರದ ರಸ್ತೆಬದಿಯಲ್ಲಿ ಶಿಶುವನ್ನು ಕಂಡಿದ್ದಾರೆ. ಮಕ್ಕಳಿಲ್ಲದ ದಂಪತಿಗಳು ಮಗುವನ್ನು ತೆಗೆದುಕೊಂಡು ತಮ್ಮ ಸ್ವಂತ ಮಗುವಿನಂತೆ ಬೆಳೆಸಿದ್ದಾರೆ. ಪತಿಯ ನಿಧನ ನಂತರ ರಾಜಲಕ್ಷ್ಮಿ ಒಂಟಿಯಾಗಿ ಬಾಲಕಿಯನ್ನು ಬೆಳೆಸಿದ್ದಾರೆ. ಮಗಳನ್ನು ಕೇಂದ್ರೀಯ ವಿದ್ಯಾಲಯಕ್ಕೆ ಸೇರಿಸಿ ಅಲ್ಲೇ ಪಕ್ಕದಲ್ಲಿ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು.
ಬಾಲಕಿ ಅಲ್ಲಿ ಗಣೇಶ್ ರತ್ ಮತ್ತು ಸಾಹು ಜೊತೆ ಸಂಬಂಧ ಬೆಳೆಸಿಕೊಂಡಳು. ಇದಕ್ಕೆ ರಾಜಲಕ್ಷ್ಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ದತ್ತು ತಾಯಿ ಮತ್ತು ಮಗಳ ನಡುವೆ ಜಗಳ ನಡೆಯುತ್ತಿತ್ತು. ರಾಜಲಕ್ಷಿಯನ್ನು ಕೊಲೆ ಮಾಡುವಂತೆ ರತ್ ಬಾಲಕಿಯನ್ನು ಪ್ರೇರೇಪಿಸಿದ್ದಾನೆ. ಆ ಮೂಲಕ ಸಂಬಂಧವನ್ನು ಮುಂದುವರಿಸಬಹುದು ಮತ್ತು ಆಸ್ತಿಯನ್ನು ಪಡೆಯಬಹುದೆಂದು ಮನವೊಲಿಸಿದ್ದನು.
ಎಪ್ರಿಲ್ 29ರ ಸಂಜೆ ಬಾಲಕಿ ತನ್ನ ತಾಯಿಗೆ ನಿದ್ರೆ ಮಾತ್ರೆಗಳನ್ನು ನೀಡಿದ್ದಾಳೆ. ರಾಜಲಕ್ಷ್ಮಿ ಪ್ರಜ್ಞೆ ತಪ್ಪಿದ ನಂತರ ಆಕೆ ರತ್ ಮತ್ತು ಸಾಹು ಜೊತೆ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದರು. ನಂತರ ಕುಟುಂಬಸ್ಥರಿಗೆ ಮತ್ತು ಆಸ್ಪತ್ರೆ ಸಿಬ್ಬಂದಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದರು.







