ಹಿಮಾಚಲ ಪ್ರದೇಶ: ಅಪರೂಪದ ಸಂಪ್ರದಾಯದಲ್ಲಿ ಒಬ್ಬಳೇ ಯುವತಿಯನ್ನು ಮದುವೆಯಾದ ಇಬ್ಬರು ಸೋದರರು
ಏನಿದು ʼಜೋಡಿದಾರ್ʼ, ಏಕೆ ಆಚರಿಸಲಾಗುತ್ತಿದೆ?; ಇಲ್ಲಿದೆ ಮಾಹಿತಿ...

Photo credit: NDTV
ಶಿಮ್ಲಾ: ಹಿಮಾಚಲ ಪ್ರದೇಶದ ಸಿರಮೌರ್ ಜಿಲ್ಲೆಯ ಶಿಲಾಯಿ ಗ್ರಾಮದಲ್ಲಿ ಸ್ಥಳೀಯವಾಗಿ ‘ಜೋಡಿದಾರ್’ ಎಂದು ಕರೆಯಲಾಗುವ ಬಹುಪತಿತ್ವ ಸಮಾರಂಭದಲ್ಲಿ ಹಟ್ಟಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಸೋದರರಿಬ್ಬರು ಒಬ್ಬಳೇ ಮಹಿಳೆಯನ್ನು ಮದುವೆಯಾಗಿದ್ದಾರೆ. ಜು.12ರಂದು ಆರಂಭಗೊಂಡಿದ್ದ ವಿವಾಹ ಸಮಾರಂಭ ವಿಜೃಂಭಣೆಯಿಂದ ನಡೆದಿದ್ದು, ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಇತರ ಸಾಂಪ್ರದಾಯಿಕ ವಿವಾಹದಂತೆ ಈ ಕಾರ್ಯಕ್ರಮವೂ ಜಾನಪದ ಸಂಗೀತ,ನೃತ್ಯ ಮತ್ತು ಸಮುದಾಯ ಉತ್ಸವಗಳಿಗೆ ಸಾಕ್ಷಿಯಾಗಿತ್ತು.
ಒಬ್ಬ ಮಹಿಳೆ ಬಹುಪುರುಷರನ್ನು, ಸಾಮಾನ್ಯವಾಗಿ ಸೋದರರನ್ನು ಮದುವೆಯಾಗುವ ಬಹುಪತಿತ್ವ ಪದ್ಧತಿಯು ಒಂದು ಕಾಲದಲ್ಲಿ ಹಟ್ಟಿ ಸಮುದಾಯದಲ್ಲಿ, ವಿಶೇಷವಾಗಿ ಸಿರಮೌರ್ ಜಿಲ್ಲೆಯಲ್ಲಿ ವ್ಯಾಪಕವಾಗಿತ್ತು. ಈಗ ಜೋಡಿದಾರ್ ಪದ್ಧತಿ ಅಪರೂಪವಾಗಿದ್ದರೂ, ಹಿಮಾಚಲ ಪ್ರದೇಶದ ಕಂದಾಯ ಕಾನೂನುಗಳಲ್ಲಿ ಮಾನ್ಯತೆಯನ್ನು ಉಳಿಸಿಕೊಂಡಿದೆ.
ಮೂರು ವರ್ಷಗಳ ಹಿಂದೆ ಪರಿಶಿಷ್ಟ ಪಂಗಡ ಎಂದು ಘೋಷಿಸಲ್ಪಟ್ಟ ಹಟ್ಟಿ ಸಮುದಾಯವು ಹಿಮಾಚಲ ಪ್ರದೇಶ-ಉತ್ತರಾಖಂಡ ಗಡಿಯಲ್ಲಿಯ ಟ್ರಾನ್ಸ್-ಗಿರಿ ಪ್ರದೇಶದಲ್ಲಿ ವಾಸವಾಗಿದೆ.
ಕಳೆದ ಆರು ವರ್ಷಗಳಲ್ಲಿ ಬಿಧಾನಾ ಗ್ರಾಮವೊಂದರಲ್ಲೇ ಐದು ಇಂತಹ ಬಹುಪತಿತ್ವ ವಿವಾಹಗಳು ನಡೆದಿವೆ. ಅವಶ್ಯಕತೆಯಿಂದಾಗಿ ಸಾವಿರಾರು ವರ್ಷಗಳ ಹಿಂದೆಯೇ ಈ ಪದ್ಧತಿ ಹುಟ್ಟಿಕೊಂಡಿತ್ತು ಎಂದು ಕೇಂದ್ರೀಯ ಹಟ್ಟಿ ಸಮಿತಿಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಇದು ಯಾವುದೇ ಬಲವಂತವಿಲ್ಲದೆ ಪರಸ್ಪರ ಸಮ್ಮತಿಯಿಂದ ಕೈಗೊಂಡ ನಿರ್ಧಾರವಾಗಿದೆ ಎಂದು ವಧು ಸುನೀತಾ ಚೌಹಾಣ್ ಹಾಗು ವರರಾದ ಪ್ರದೀಪ ಮತ್ತು ಕಪಿಲ್ ನೇಗಿ ಹೇಳಿದರು.
‘ನಮಗೆ ನಮ್ಮ ಸಂಪ್ರದಾಯದ ಬಗ್ಗೆ ಹೆಮ್ಮೆಯಿದೆ, ಹೀಗಾಗಿ ನಾವದನ್ನು ಸಾರ್ವಜನಿಕವಾಗಿ ಅನುಸರಿಸಿದ್ದೇವೆ. ಅದು ಜಂಟಿ ನಿರ್ಧಾರವಾಗಿತ್ತು’ ಎಂದು ಸರಕಾರಿ ಉದ್ಯೋಗಿಯಾಗಿರುವ ಪ್ರದೀಪ್ ಹೇಳಿದರು.
‘ಒಗ್ಗಟ್ಟಿನ ಕುಟುಂಬವಾಗಿ ನಾವು ನಮ್ಮ ಪತ್ನಿಗೆ ಬೆಂಬಲ, ಸ್ಥಿರತೆ ಮತ್ತು ಪ್ರೀತಿಯನ್ನು ಖಚಿತಪಡಿಸುತ್ತಿದ್ದೇವೆ. ನಾವು ಯಾವಾಗಲೂ ಪಾರದರ್ಶಕತೆಯಲ್ಲಿ ನಂಬಿಕೆಯನ್ನು ಹೊಂದಿದ್ದೇವೆ’ ಎಂದು ಅವರ ಸೋದರ, ವಿದೇಶದಲ್ಲಿ ಉದ್ಯೋಗದಲ್ಲಿರುವ ಕಪಿಲ್ ನೇಗಿ ಹೇಳಿದರು.
ಕುನ್ಹಾಟ್ ಗ್ರಾಮಕ್ಕೆ ಸೇರಿದ ಸುನೀತಾ, ‘ನಾನು ಸಂಪ್ರದಾಯವನ್ನು ಗೌರವಿಸುತ್ತೇನೆ. ನನಗೆ ಸಂಪ್ರದಾಯದ ಬಗ್ಗೆ ತಿಳಿದಿದೆ ಮತ್ತು ಯಾವುದೇ ಒತ್ತಡವಿಲ್ಲದೆ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ’ ಎಂದು ಹೇಳಿದರು.
ಈ ವಿವಾಹ ಸಮಾರಂಭದ ವೀಡಿಯೊಗಳು ವೈರಲ್ ಆಗಿದ್ದು,ಈ ಐತಿಹಾಸಿಕ ಪದ್ಧತಿಯ ಬಗ್ಗೆ ಹೊಸದಾಗಿ ಕುತೂಹಲಗಳು ಗರಿಗೆದರಿವೆ.
ಏನಿದು ಜೋಡಿದಾರ್, ಏಕೆ ಆಚರಿಸಲಾಗುತ್ತಿದೆ?:
ಜೋಡಿದಾರ್ ಹಟ್ಟಿ ಬುಡಕಟ್ಟು ಸಮುದಾಯದಲ್ಲಿ ಆಚರಿಸಲಾಗುವ ಬಹುಪತಿತ್ವ ವಿವಾಹದ ಒಂದು ಸಾಂಪ್ರದಾಯಿಕ ವಿವಾಹವಾಗಿದ್ದು,ಇದರಲ್ಲಿ ಮಹಿಳೆ ಇಬ್ಬರು ಅಥವಾ ಹೆಚ್ಚಿನ ಸೋದರರನ್ನು ಮದುವೆಯಾಗುತ್ತಾಳೆ.
ಬಹುಪತಿತ್ವ ಪದ್ಧತಿಯು ಹಲವು ಉತ್ತರಾಧಿಕಾರಿಗಳಿಗೆ ಪೂರ್ವಜರ ಭೂಮಿಯ ಹಂಚಿಕೆಯನ್ನು ತಡೆಯಲು ನೆರವಾಗಿದೆ. ಒಂದು ಕುಟುಂಬಕ್ಕೆ ಸೇರಿದ ಕೃಷಿಭೂಮಿಯನ್ನು ಇನ್ನಷ್ಟು ವಿಭಜನೆಯಿಂದ ರಕ್ಷಿಸಲು ಸಾವಿರಾರು ವರ್ಷಗಳ ಹಿಂದೆಯೇ ಈ ಸಂಪ್ರದಾಯವನ್ನು ಹುಟ್ಟುಹಾಕಲಾಗಿತ್ತು ಎಂದು ಕೇಂದ್ರೀಯ ಹಟ್ಟಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಂದನ ಸಿಂಗ್ ಶಾಸ್ತ್ರಿ ತಿಳಿಸಿದರು.
ಸೋದರರ ನಡುವೆ ಏಕತೆಯನ್ನು ಬೆಳೆಸುವುದು, ಜಂಟಿ ಕುಟುಂಬ ವ್ಯವಸ್ಥೆಗಳ ಸಂರಕ್ಷಣೆ ಹಾಗೂ ದೂರದ, ಗುಡ್ಡಗಾಡು ಪ್ರದೇಶಗಳಲ್ಲಿ ಸುರಕ್ಷಿತ ಮತ್ತು ಸ್ಥಿರವಾದ ವಾತಾವರಣವನ್ನು ಖಚಿತಪಡಿಸುವುದು ಇತರ ಕಾರಣಗಳಲ್ಲಿ ಸೇರಿವೆ.
ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ನೀವು ಬುಡಕಟ್ಟು ಸಮಾಜದಲ್ಲಿ ಹೆಚ್ಚು ಸುರಕ್ಷಿತರಾಗಿರುತ್ತೀರಿ ಎಂದು ವಿವರಿಸಿದ ಶಾಸ್ತ್ರಿ, ಸಾಮೂಹಿಕ, ದೀರ್ಘಾವಧಿಗೆ ಗಮನ ಅಗತ್ಯವಾಗಿದ್ದ ಚದುರಿ ಹೋಗಿದ್ದ ಕೃಷಿ ಭೂಮಿಗಳನ್ನು ನಿರ್ವಹಿಸಲೂ ಈ ಸಂಪ್ರದಾಯವು ನೆರವಾಗಿದೆ ಎಂದರು.
ಹೆಚ್ಚುತ್ತಿರುವ ಸಾಕ್ಷರತೆ, ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಮತ್ತು ವಿಕಸನಗೊಳ್ಳುತ್ತಿರುವ ಮಹಿಳೆಯರ ಪಾತ್ರದ ಹೊರತಾಗಿಯೂ ಪ್ರದೇಶದಲ್ಲಿಯ ಕೆಲವು ಸಮುದಾಯಗಳು ಈಗಲೂ ಹೆಚ್ಚು ಪ್ರಚಾರವಿಲ್ಲದೆ ಇಂತಹ ಮದುವೆಗಳನ್ನು ನಡೆಸುತ್ತವೆ.







