ಮಹಾರಾಷ್ಟ್ರ | ಜಾತಿ ಕಾರಣಕ್ಕಾಗಿ ತನ್ನ ಪೋಷಕರಿಂದಲೇ ಹತ್ಯೆಯಾದ ಪ್ರಿಯಕರನ ಮೃತದೇಹವನ್ನೇ ವರಿಸಿದ ಯುವತಿ!

Photo Credit : NDTV
ನಾಂದೇಡ್ (ಮಹಾರಾಷ್ಟ್ರ): ತಮ್ಮ ಪುತ್ರಿಯನ್ನು ಪ್ರೀತಿಸಿದ ಯುವಕ ಬೇರೆಜಾತಿಗೆ ಸೇರಿದವನು ಎಂಬ ಕಾರಣಕ್ಕೆ ಯುವತಿಯ ಪೋಷಕರು ಆತನನ್ನು ಥಳಿಸಿ ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ. ಇದರ ಬೆನ್ನಿಗೇ, ಆತನ ಅಂತ್ಯಕ್ರಿಯೆಗೆ ಹಾಜರಾದ ಆತನ ಪ್ರೇಯಸಿ, ಹಣೆಗೆ ಕುಂಕುಮ ಧರಿಸಿ, ತಾನು ತನ್ನ ಪ್ರಿಯಕರನ ಮನೆಯಲ್ಲಿ ಆತನ ಪತ್ನಿಯಾಗಿ ಜೀವಿಸುತ್ತೇನೆ ಎಂದು ಶಪಥ ಮಾಡಿದ್ದಾಳೆ.
ಮೃತ ಯುವಕನನ್ನು ಸಕ್ಷಮ್ ಟಾಟೆ (20) ಎಂದು ಗುರುತಿಸಲಾಗಿದ್ದು, ಆತನ ಪ್ರೇಯಸಿ ಆಂಚಲ್ ತನ್ನ ಸಹೋದರರ ಮೂಲಕ ಆತನ ಸಂಪರ್ಕಕ್ಕೆ ಬಂದಿದ್ದಳು ಎನ್ನಲಾಗಿದೆ. ದಿನಗಳೆದಂತೆ ಪದೇ ಪದೇ ಆತನ ಮನೆಗೆ ಭೇಟಿ ನೀಡುತ್ತಿದ್ದ ಆಂಚಲ್, ಬಳಿಕ ಆತನಿಗೆ ಆಪ್ತಳಾಗಿದ್ದಾಳೆ. ಮೂರು ವರ್ಷಗಳ ನಂತರ, ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಆತನ ಸಂಬಂಧ ತೊರೆಯುವಂತೆ ಆಂಚಲ್ ಮೇಲೆ ಆಕೆಯ ಕುಟುಂಬದ ಸದಸ್ಯರು ಒತ್ತಡ ಹೇರತೊಡಗಿದ್ದಾರೆ. ಆದರೆ, ತನಗೆ ಅಸಂಖ್ಯಾತ ಬೆದರಿಕೆ ಒಡ್ಡಿದರೂ ಹಿಂಜರಿಯದ ಟಾಟೆ, ಆಂಚಲ್ ಳೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದಾನೆ.
ಆಂಚಲ್ ಹಾಗೂ ಸಕ್ಷಮ್ ಟಾಟೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ತಿಳಿದ ಆಕೆಯ ಸಹೋದರರು ಹಾಗೂ ತಂದೆ, ಗುರುವಾರ ಟಾಟೆಯನ್ನು ಥಳಿಸಿ, ಆತನ ತಲೆಗೆ ಗುಂಡಿಟ್ಟು ಹತ್ಯೆಗೈದಿದ್ದಾರೆ. ಬಳಿಕ, ಆತನ ತಲೆಯನ್ನು ಕಲ್ಲಿನಿಂದ ಭೀಕರವಾಗಿ ಜಜ್ಜಿದ್ದಾರೆ.
ಟಾಟೆಯ ಅಂತ್ಯಕ್ರಿಯೆ ನಡೆಯುವಾಗ, ಆತನ ನಿವಾಸಕ್ಕೆ ಧಾವಿಸಿರುವ ಆಂಚಲ್, ತನ್ನ ಮೈಗೆ ಅರಿಶಿಣ ಹಚ್ಚಿಕೊಂಡು, ಹಣೆಗೆ ಕುಂಕುಮ ಧರಿಸಿ, ಆತನ ಮೃತ ದೇಹವನ್ನು ವಿವಾಹವಾಗಿದ್ದಾಳೆ. ಬಳಿಕ, ತನ್ನ ಉಳಿದ ಜೀವಿತಾವಧಿಯನ್ನು ಟಾಟೆಯ ನಿವಾಸದಲ್ಲಿ ಆತನ ಪತ್ನಿಯಾಗಿ ಕಳೆಯುವುದಾಗಿ ಘೋಷಿಸಿದ್ದಾಳೆ.
ನಂತರ ಮಾತನಾಡಿದ ಆಕೆ, “ಸಕ್ಷಮ್ ಸಾವು ಹಾಗೂ ನನ್ನ ತಂದೆ ಮತ್ತು ಸಹೋದರರನ್ನು ಕಳೆದುಕೊಂಡ ಹೊರತಾಗಿಯೂ, ನಮ್ಮ ಪ್ರೀತಿ ಗೆದ್ದಿದೆ. ಸಕ್ಷಮ್ ಹಂತಕರಿಗೆ ಮರಣ ದಂಡನೆ ವಿಧಿಸಬೇಕು” ಎಂದು ಆಗ್ರಹಿಸಿದ್ದಾಳೆ. “ಸಕ್ಷಮ್ ಟಾಟೆ ಮೃತಪಟ್ಟಿದ್ದರೂ, ನಮ್ಮ ಪ್ರೀತಿ ಇನ್ನೂ ಜೀವಂತವಾಗಿರುವುದರಿಂದ ನಾನು ಆತನ ಮೃತ ದೇಹವನ್ನು ವರಿಸಿದ್ದೇನೆ” ಎಂದೂ ಆಕೆ ಒತ್ತಿ ಹೇಳಿದ್ದಾಳೆ.
ಪೊಲೀಸರು ಈ ಸಂಬಂಧ ಆರು ಮಂದಿ ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡು, ಅವರನ್ನೆಲ್ಲ ಬಂಧಿಸಿದ್ದಾರೆ.







