48 ಗಂಟೆಗಳ ವಿಚಾರಣೆಯ ಬಳಿಕ ಭಾವಿ ಅಳಿಯನೊಂದಿಗೆ ಪರಾರಿಯಾಗಿದ್ದ ಮಹಿಳೆಯ ಬಿಡುಗಡೆ

ಸಾಂದರ್ಭಿಕ ಚಿತ್ರ | PC : PTI
ಅಲಿಗಡ: ಭಾವಿ ಅಳಿಯನೊಂದಿಗೆ ಪರಾರಿಯಾಗಿ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದ ಮಹಿಳೆ ಬುಧವಾರ ಇಲ್ಲಿ ಪೋಲಿಸರೆದುರು ಶರಣಾಗಿದ್ದು,48 ಗಂಟೆಗಳ ವಿಚಾರಣೆ ಮತ್ತು ಸಮಾಲೋಚನೆಯ ಬಳಿಕ ಇಬ್ಬರನ್ನೂ ಬಿಡುಗಡೆಗೊಳಿಸಲಾಗಿದೆ.
ಮನೋಹರಪುರ ಗ್ರಾಮದ ನಿವಾಸಿ ಸಪ್ನಾ ದೇವಿ(39) ಮತ್ತು ರಾಹುಲ್(25) 10 ದಿನಗಳ ಕಾಲ ತಲೆಮರೆಸಿಕೊಂಡ ಬಳಿಕ ಬುಧವಾರ ಸಂಜೆ ಸ್ಥಳೀಯ ಪೋಲಿಸ್ ಠಾಣೆಗೆ ಶರಣಾದಾಗ ಅವರನ್ನು ಬಂಧಿಸಲಾಗಿತ್ತು.
ತಾವು ಪರಸ್ಪರ ಸಂಬಂಧದಲ್ಲಿದ್ದೇವೆ ಮತ್ತು ಮದುವೆಯಾಗಲು ನಿರ್ಧರಿಸಿದ್ದೇವೆ ಎಂದು ಜೋಡಿ ಪೋಲಿಸರಿಗೆ ಸ್ಪಷ್ಟಪಡಿಸಿದೆ. ಸಪ್ನಾ ತನ್ನ ಪತಿ ಮತ್ತು ಮಕ್ಕಳ ಬಳಿಗೆ ಮರಳುವಂತೆ ಯಾರೂ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಪ್ನಾಳ ಪತಿ ಜಿತೇಂದ್ರ,ಅವರ ಮೂವರು ಮಕ್ಕಳು ಕುಟುಂಬದ ಇತರ ಸದಸ್ಯರು ಮತ್ತು ನೆರೆಕರೆಯವರೊಂದಿಗೆ ಸೇರಿಕೊಂಡು ಆಕೆಯನ್ನು ಮರಳಿ ಮನೆಗೆ ಕಳುಹಿಸುವಂತೆ ಒತ್ತಾಯಿಸಿ ಮಂದ್ರಕ್ ಪೋಲಿಸ್ ಠಾಣೆಯೆದುರು ಎರಡು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರು. ‘ಸಪ್ನಾ ತನ್ನ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದರೆ ಆಕೆಯನ್ನು ಕ್ಷಮಿಸಲು ಮತ್ತು ಮರಳಿ ಸ್ವೀಕರಿಸಲು ನಾವು ಸಿದ್ಧರಿದ್ದೇವೆ ’ಎಂದು ಸುದ್ದಿಗಾರರಿಗೆ ತಿಳಿಸಿದ್ದ ಕುಟುಂಬ ಸದಸ್ಯರು,ಇಲ್ಲದಿದ್ದರೆ ಆಕೆ ತನ್ನೊಂದಿಗೆ ಒಯ್ದಿದ್ದ ಐದು ಲಕ್ಷ ರೂ. ಮತ್ತು ಚಿನ್ನಾಭರಣಗಳನ್ನು ಮರಳಿಸುವಂತೆ ಆಕೆಗೆ ಸೂಚಿಸಬೇಕು ಎಂದು ಹೇಳಿದ್ದರು.
ಆದರೆ ಇದನ್ನು ನಿರಾಕರಿಸಿರುವ ಸಪ್ನಾ, ಇದೆಲ್ಲವೂ ಕಟ್ಟುಕಥೆ ಎಂದು ಹೇಳಿದ್ದಾಳೆ.
ನೆರೆಯ ಗ್ರಾಮದ ರಾಹುಲ್ ಹಿಂದೆಯೂ ಇಂತಹುದೇ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಮನೋಹರಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ರಾಹುಲ್ ಜೊತೆ ಸಪ್ನಾಳ ಮದುವೆ ನಡೆಯಬೇಕಿದ್ದ ಕೇವಲ 10 ದಿನಗಳ ಮುನ್ನ ಎ.6ರಂದು ಈ ಭಾವಿ ಅತ್ತೆ-ಭಾವಿ ಅಳಿಯನ ಜೋಡಿ ಪರಾರಿಯಾಗಿತ್ತು.
ಜೋಡಿ ಬಿಹಾರದ ಸಿತಾಮಡಿಗೆ ಪರಾರಿಯಾಗಿದ್ದು,ಅಲ್ಲಿಂದ ನೇಪಾಳಕ್ಕೆ ದಾಟಿತ್ತು. ತಮ್ಮ ಕತ್ತಿನ ಸುತ್ತ ಕುಣಿಕೆ ಬಿಗಿಯಾಗುತ್ತಿದೆ ಎನ್ನುವುದು ಗೊತ್ತಾದಾಗ ಅಲಿಗಡಕ್ಕೆ ಮರಳಲು ಮತ್ತು ಪೋಲಿಸರೆದುರು ಶರಣಾಗಲು ನಿರ್ಧರಿಸಿದ್ದರು ಎಂದು ಹಿರಿಯ ಪೋಲಿಸ್ ಅಧಿಕಾರಿ ತಿಳಿಸಿದರು.







