ಮಹಿಳೆಯರು ಅತ್ಯಾಚಾರ ಕಾನೂನನ್ನು ಪುರುಷರ ವಿರುದ್ಧ ಅಸ್ತ್ರವಾಗಿ ಬಳಸುತ್ತಿದ್ದಾರೆ: ಉತ್ತರಾಖಂಡ ಹೈಕೋರ್ಟ್

Photo : ಉತ್ತರಾಖಂಡ ಹೈಕೋರ್ಟ್ | PTI
ಡೆಹ್ರಾಡೂನ್: ಮಹಿಳೆಯರು ವಿವಿಧ ಕಾರಣಗಳಿಗಾಗಿ ತಮ್ಮ ಪುರುಷ ಸಂಗಾತಿಗಳ ವಿರುದ್ಧ ಅತ್ಯಾಚಾರ ಕಾನೂನನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ಉತ್ತರಾಖಂಡ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.
ಮದುವೆಯಾಗುತ್ತೇನೆಂಬ ಭರವಸೆ ನೀಡಿ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿರುವುದಕ್ಕಾಗಿ ಓರ್ವ ಪುರುಷನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಿ ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿ ಶರದ್ ಕುಮಾರ್ ಶರ್ಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮನೋಜ್ ಕುಮಾರ್ ಆರ್ಯ ಎಂಬ ವ್ಯಕ್ತಿಯು ದೂರುದಾರ ಮಹಿಳೆಯೊಂದಿಗೆ 2005ರಿಂದ ಪರಸ್ಪರ ಸಮ್ಮತಿಯ ಲೈಂಗಿಕ ಸಂಬಂಧವನ್ನು ಹೊಂದಿದ್ದರು ಎಂದು ನ್ಯಾ. ಶರ್ಮ ಹೇಳಿದರು. ತಮ್ಮಲ್ಲಿ ಒಬ್ಬರಿಗೆ ಕೆಲಸ ಸಿಕ್ಕಿದ ತಕ್ಷಣ ಮದುವೆಯಾಗುವ ಭರವಸೆಯನ್ನು ಅವರು ಪರಸ್ಪರರಿಗೆ ನೀಡಿದ್ದರು ಎಂದು ಹೈಕೋರ್ಟ್ ತಿಳಿಸಿದೆ.
ಆದರೆ, ಪುರುಷನು ಇನ್ನೋರ್ವ ಮಹಿಳೆಯನ್ನು ಮದುವೆಯಾದ ಬಳಿಕವೂ ಅವರ ಸಂಬಂಧ ಮುಂದುವರಿದಿತ್ತು. ಆದರೆ, ಮಹಿಳೆಯು 2020 ಜೂನ್ 30ರಂದು ತನ್ನ ಸಂಗಾತಿಯ ವಿರುದ್ಧ ದೂರು ದಾಖಲಿಸಿದರು.
‘‘ಮದುವೆಯ ಭರವಸೆ, ಆ ಭರವಸೆಯ ಆಧಾರದಲ್ಲಿ ಸಮ್ಮತಿಯ ಲೈಂಗಿಕ ಸಂಬಂಧ, ಹುಸಿಯಾದ ಮದುವೆಯ ಭರವಸೆ- ಇವುಗಳೆಲ್ಲವನ್ನೂ ಸಂಬಂಧದ ಆರಂಭಿಕ ಹಂತದಲ್ಲೇ ಪರೀಕ್ಷಿಸಿಕೊಳ್ಳಬೇಕು, ನಂತರದ ಹಂತಗಳಲ್ಲಿ ಅಲ್ಲ’’ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಹದಿನೈದು ವರ್ಷಗಳ ಸುದೀರ್ಘ ಸಂಬಂಧವು, ಅರ್ಜಿದಾರನ ಮದುವೆಯ ಬಳಿಕವೂ ಮುಂದುವರಿದಿತ್ತು. ಅದನ್ನು ಆರಂಭಿಕ ಹಂತ ಎನ್ನಲು ಸಾಧ್ಯವಾಗದು’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.







