ಸ್ಥಳೀಯ ಸಮಸ್ಯೆಗಳು, ಮಹಿಳಾ ಮತದಾನ: Maharastra ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ AIMIM

ಅಸದುದ್ದೀನ್ ಉವೈಸಿ | PC : PTI
ಹೈದರಾಬಾದ್(ತೆಲಂಗಾಣ): ಹೈದರಾಬಾದ್ ಮೂಲದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) 2026ರ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಗಾಳಿಪಟ ಚಿಹ್ನೆಯಡಿ ಸ್ಪರ್ಧಿಸಿದ ಪಕ್ಷವು, ರಾಜ್ಯದ ವಿವಿಧ ಪ್ರಮುಖ ಪುರಸಭೆಗಳಲ್ಲಿ ಒಟ್ಟು 125 ಸ್ಥಾನಗಳನ್ನು ಗೆದ್ದು, ಮಹಾರಾಷ್ಟ್ರದ ನಗರ ರಾಜಕೀಯದಲ್ಲಿ ಗಮನಾರ್ಹ ಶಕ್ತಿಯಾಗಿ ಹೊರಹೊಮ್ಮಿದೆ.
ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ ನಂತರ, AIMIM ಮಹಾರಾಷ್ಟ್ರದ ನಗರ ಪ್ರದೇಶಗಳಲ್ಲಿ ತನ್ನ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಫಲಿತಾಂಶಗಳು ರಾಜ್ಯದ ಸಾಂಪ್ರದಾಯಿಕ ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ಬದಲಾವಣೆಯ ಸೂಚನೆ ನೀಡುತ್ತಿವೆ.
ಹಿಂದಿನ ಚುನಾವಣಾ ಹಿನ್ನೆಲೆ
2024ರ ಲೋಕಸಭಾ ಚುನಾವಣೆಯಲ್ಲಿ AIMIM ನಿರೀಕ್ಷಿತ ಸಾಧನೆ ಮಾಡಲಿಲ್ಲ. ಛತ್ರಪತಿ ಸಂಭಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೈಯದ್ ಇಮ್ತಿಯಾಜ್ ಜಲೀಲ್ ಸೋಲು ಅನುಭವಿಸಿದ ಪರಿಣಾಮ, ಪಕ್ಷ ತನ್ನ ಏಕೈಕ ಲೋಕಸಭಾ ಸ್ಥಾನವನ್ನೂ ಕಳೆದುಕೊಂಡಿತ್ತು.
ಅದೇ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷದ ಸಾಧನೆ ಸೀಮಿತವಾಗಿತ್ತು. ಸ್ಪರ್ಧಿಸಿದ್ದ 16 ಕ್ಷೇತ್ರಗಳಲ್ಲಿ ಕೇವಲ ಒಂದೇ ಕ್ಷೇತ್ರ ಮಾಲೆಗಾಂವ್ ಸೆಂಟ್ರಲ್ನಲ್ಲಿ AIMIM ಗೆಲುವು ಸಾಧಿಸಿತು. ಇಲ್ಲಿ ಪಕ್ಷದ ಅಭ್ಯರ್ಥಿ ಮುಫ್ತಿ ಮುಹಮ್ಮದ್ ಇಸ್ಮಾಯಿಲ್ ಅಬ್ದುಲ್ ಖಾಲಿಕ್ ಕೇವಲ 162 ಮತಗಳ ಅಂತರದಲ್ಲಿ ಜಯಗಳಿಸಿದ್ದರು.
ಕಾಂಗ್ರೆಸ್, ಸಮಾಜವಾದಿ ಪಕ್ಷ, NCPಗೆ ಹಿನ್ನಡೆ
ಇತ್ತೀಚಿನ ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು, ಅಲ್ಪಸಂಖ್ಯಾತ ಮತದಾನದ ಮಾದರಿಯಲ್ಲಿ ಸ್ಪಷ್ಟ ಬದಲಾವಣೆಯನ್ನು ತೋರಿಸುತ್ತಿವೆ. ಇದುವರೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು NCPಗೆ ಸಾಂಪ್ರದಾಯಿಕವಾಗಿ ಬೆಂಬಲ ನೀಡುತ್ತಿದ್ದ ಹಲವು ಅಲ್ಪಸಂಖ್ಯಾತರ ಪ್ರಾಬಲ್ಯದ ವಾರ್ಡ್ಗಳಲ್ಲಿ AIMIM ಮುನ್ನಡೆ ಸಾಧಿಸಿದೆ.
ವಿಶೇಷವಾಗಿ ಔರಂಗಾಬಾದ್ ಹಾಗೂ ಮಾಲೆಗಾಂವ್ ನಗರಗಳಲ್ಲಿ ಈ ಪಕ್ಷಗಳ ಬೆಂಬಲಿಗರನ್ನು AIMIM ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗಾಳಿಪಟ ಚಿಹ್ನೆಯಡಿ ಮುಸ್ಲಿಂ ಮತಗಳ ಏಕೀಕರಣ ಸ್ಪಷ್ಟವಾಗಿ ಗೋಚರಿಸಿದೆ.
ಉವೈಸಿ ಸಹೋದರರಿಂದ ತೀವ್ರ ಪ್ರಚಾರ
ಪಕ್ಷದ ಈ ಸಾಧನೆಯ ಹಿಂದೆ ಅಸದುದ್ದೀನ್ ಉವೈಸಿ ನೇತೃತ್ವದ ತೀವ್ರ ಪ್ರಚಾರ ಪ್ರಮುಖ ಕಾರಣವಾಗಿದೆ. ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಉವೈಸಿ ನೆಲಮಟ್ಟದಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಜನವರಿ 3ರಿಂದ 13ರವರೆಗೆ, ಉವೈಸಿ ಸಹೋದರರು ಔರಂಗಾಬಾದ್, ಮಾಲೆಗಾಂವ್, ನಾಂದೇಡ್, ನಾಗ್ಪುರ ಹಾಗೂ ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಡಜನ್ಗಟ್ಟಲೆ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಿದರು. ಈ ಸಭೆಗಳು ನಾಗರಿಕ ನಿರ್ಲಕ್ಷ್ಯ, ರಾಜಕೀಯ ಪ್ರಾತಿನಿಧ್ಯದ ಕೊರತೆ ಮತ್ತು ನಗರ ಆಡಳಿತದ ವೈಫಲ್ಯಗಳ ಮೇಲೆ ಕೇಂದ್ರೀಕೃತವಾಗಿದ್ದವು.
ಹೆಚ್ಚು ಪ್ರದೇಶಗಳನ್ನು ತಲುಪುವ ಉದ್ದೇಶದಿಂದ, ಅಸದುದ್ದೀನ್ ಉವೈಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಹೆಲಿಕಾಪ್ಟರ್ಗಳನ್ನೂ ಬಳಸಿದರು.
ಪ್ರಚಾರದ ಪ್ರಮುಖ ಅಂಶಗಳು: ಸ್ಥಳೀಯ ಸಮಸ್ಯೆಗಳ ಪ್ರಸ್ತಾಪ
ಮೂಲಸೌಕರ್ಯದ ಕೊರತೆ, ಕುಡಿಯುವ ನೀರು, ನೈರ್ಮಲ್ಯ ಹಾಗೂ ಇತರ ನಾಗರಿಕ ಸೇವೆಗಳ ಲೋಪವನ್ನು ಉವೈಸಿ ತಮ್ಮ ಭಾಷಣಗಳಲ್ಲಿ ಪದೇಪದೇ ಪ್ರಸ್ತಾಪಿಸಿದರು. AIMIM ಪುರಸಭೆಗಳಲ್ಲಿ ಈ ಸಮಸ್ಯೆಗಳನ್ನು ನಿರಂತರವಾಗಿ ಎತ್ತಿ ಹಿಡಿಯಲಿದೆ ಎಂಬ ಭರವಸೆಯನ್ನು ಮತದಾರರಿಗೆ ನೀಡಿದರು. ಮನೆ-ಮನೆ ಸಂಪರ್ಕ, ‘ಪೈದಲ್ ದೌರಾ’ ಮತ್ತು ಸಣ್ಣ ಸಮುದಾಯ ಸಭೆಗಳು ಈ ಸಂದೇಶವನ್ನು ಜನರಿಗೆ ನೇರವಾಗಿ ತಲುಪಿಸಿದವು.
ಹಿಂದಿನ ಸೋಲಿನಿಂದ ಪಾಠ:
ಹಿಂದಿನ ಚುನಾವಣೆಗಳಲ್ಲಿ ಎದುರಿಸಿದ ಸೋಲುಗಳಿಂದ ಹೊರಬರಲು, ಈ ಬಾರಿ ಹೆಚ್ಚು ಶ್ರಮಿಸಬೇಕೆಂದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಉವೈಸಿ ಕರೆ ನೀಡಿದರು.
ಮಹಿಳಾ ಮತದಾರರ ಪಾತ್ರ:
ಮಹಿಳೆಯರ ಬೆಂಬಲವನ್ನು ಉವೈಸಿ ವಿಶೇಷವಾಗಿ ಎತ್ತಿ ಹಿಡಿದರು. ಇಸ್ಲಾಂನಲ್ಲಿ ಮಹಿಳೆಯರ ಶಕ್ತಿಯನ್ನು ವಿವರಿಸಲು ಧಾರ್ಮಿಕ ಉಲ್ಲೇಖಗಳನ್ನು ಬಳಸಿದ ಅವರು, ಬಿಹಾರದಲ್ಲಿ ಮಹಿಳೆಯರ ಬೆಂಬಲದಿಂದ ಪಕ್ಷ ಗೆಲುವು ಸಾಧಿಸಿದ ಉದಾಹರಣೆಗಳನ್ನೂ ಪ್ರಸ್ತಾಪಿಸಿದರು.
ಅತೃಪ್ತ ನಾಯಕರ ಒಗ್ಗೂಡಿಕೆ:
ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಸಮನ್ವಯಗೊಳಿಸಿ, ದೂರ ಸರಿದ ನಾಯಕರನ್ನು ಮರಳಿ ಕರೆತರುವ ಕಾರ್ಯವನ್ನು ಉವೈಸಿ ಸ್ವತಃ ಮುನ್ನಡೆಸಿದರು. ಇದರಿಂದ ಆಂತರಿಕ ಅಸಮಾಧಾನವೇ ಚುನಾವಣಾ ಬಲವಾಗಿ ರೂಪಾಂತರಗೊಂಡಿದೆ ಎಂದು ಪಕ್ಷ ವಲಯಗಳು ಹೇಳಿವೆ.
ಪ್ರತಿಸ್ಪರ್ಧಿಗಳ ಮೇಲೆ ಟೀಕೆ:
ಪ್ರಚಾರದ ಕೆಲ ಹಂತಗಳಲ್ಲಿ, ವಿಶೇಷವಾಗಿ ಪರ್ಭಾನಿಯಲ್ಲಿ, ಉವೈಸಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಾಯಿ ಸೇರಿದಂತೆ ಮುಖ್ಯವಾಹಿನಿಯ ನಾಯಕರ ವಿರುದ್ಧ ತೀವ್ರ ಟೀಕೆ ನಡೆಸಿದರು. ಅಲ್ಪಸಂಖ್ಯಾತ ಸಮಸ್ಯೆಗಳ ಕುರಿತು ಖಾಲಿ ಭರವಸೆ ನೀಡಿದ ಪಕ್ಷಗಳ ವಿರುದ್ಧ ಮತದಾರರು ಹೊಣೆಗಾರಿಕೆಯನ್ನು ಒತ್ತಾಯಿಸಬೇಕೆಂದು ಅವರು ಹೇಳಿದರು.
‘ಫೈರ್ಬ್ರಾಂಡ್’ ಅಕ್ಬರುದ್ದೀನ್ ಉವೈಸಿ
ಮುಂಬೈ ಹಾಗೂ ಛತ್ರಪತಿ ಸಂಭಾಜಿನಗರದಲ್ಲಿ ಅಕ್ಬರುದ್ದೀನ್ ಉವೈಸಿ ತಮ್ಮ ತೀಕ್ಷ್ಣ ವಾಕ್ಚಾತುರ್ಯದಿಂದ ಗಮನ ಸೆಳೆದರು. ಔರಂಗಾಬಾದ್ ಮರುನಾಮಕರಣದಂತಹ ವಿಷಯಗಳಿಗೆ ಕಾರಣರಾದವರು ಸ್ಥಳೀಯ ಸಂಸ್ಥೆಗಳ ಆಡಳಿತದ ಅಧಿಕಾರದಲ್ಲಿರಬಾರದು ಎಂಬ ವಾದವನ್ನು ಅವರು ಮುಂದಿಟ್ಟರು.
ಈ ಹಿಂದೆ ‘15 ನಿಮಿಷಗಳು’ ಎಂಬ ಉಲ್ಲೇಖದ ಭಾಷಣಗಳಿಂದ ಪರಿಚಿತವಾಗಿದ್ದ ಅವರ ಭಾಷಣ ಶೈಲಿ, ಈ ಬಾರಿ ಸಹ ಪ್ರಚಾರದ ಧ್ವನಿಗೆ ತೀಕ್ಷ್ಣತೆಯನ್ನು ನೀಡಿದ್ದು, ಎದುರಾಳಿಗಳ ವಿರುದ್ಧ ಹೋರಾಟದ ನಿಲುವನ್ನು ಬಲಪಡಿಸಿದೆ.
ನಗರ ರಾಜಕೀಯದಲ್ಲಿ AIMIM ಉದಯ
ಉವೈಸಿ ಸಹೋದರರ ಸಂಯೋಜಿತ ಪ್ರಚಾರ ತಂತ್ರ AIMIMಗೆ ಮಹಾರಾಷ್ಟ್ರದ ನಗರ ಪ್ರದೇಶಗಳಾದ್ಯಂತ ಗಮನಾರ್ಹ ಸ್ಥಾನಗಳನ್ನು ಗೆಲ್ಲಲು ನೆರವಾಯಿತು. ಈ ಮೂಲಕ AIMIM, ರಾಜ್ಯದಲ್ಲಿ ಅಂಚಿನಲ್ಲಿದ್ದ ಪಕ್ಷದಿಂದ ಉದಯೋನ್ಮುಖ ನಗರ ರಾಜಕೀಯ ಶಕ್ತಿಯಾಗಿ ರೂಪಾಂತರಗೊಂಡಿದೆ.
ಕಾಂಗ್ರೆಸ್ ಮತ್ತು NCPಗಳ ಭದ್ರಕೋಟೆಗಳನ್ನು ದುರ್ಬಲಗೊಳಿಸುವುದರ ಜೊತೆಗೆ, ಪ್ರಮುಖ ನಗರಗಳಲ್ಲಿ ತನ್ನ ಸ್ಥಿತಿಯನ್ನು ಗಟ್ಟಿಗೊಳಿಸಿರುವ AIMIMನ ಈ ಸಾಧನೆ, ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.







