ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಕಾಲಮಿತಿ ನಿಗದಿಗೊಳಿಸುವವರೆಗೂ ಸುಮ್ಮನೆ ಕೂರುವುದಿಲ್ಲ: ಸ್ಟಾಲಿನ್ ಘೋಷಣೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Photo: PTI)
ಚೆನ್ನೈ: ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಕಾಲಮಿತಿ ನಿಗದಿಗೊಳಿಸುವವರೆಗೂ ನಾನು ಸುಮ್ಮನೆ ಕೂರುವುದಿಲ್ಲ ಎಂದು ಶುಕ್ರವಾರ ಘೋಷಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, “ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಕಾಲಮಿತಿ ನಿಗದಿಗೊಳಿಸಲು ಸಂವಿಧಾನದ ವಿಧಿ 200ಕ್ಕೆ ತಿದ್ದುಪಡಿ ತರಬೇಕು” ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟನೆ ಬಿಡುಗಡೆ ಮಾಡಿರುವ ಎಂ.ಕೆ.ಸ್ಟಾಲಿನ್, “ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವ ಕುರಿತು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದಿಂದ, ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ತಡೆಹಿಡಿದಿದ್ದ ಹತ್ತು ಮಸೂದೆಗಳ ಕುರಿತು ಎಪ್ರಿಲ್ 8, 2025ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಆ ಮಸೂದೆಗಳಿಗೆ ಈಗಾಗಲೇ ರಾಜ್ಯಪಾಲರು ಅಂಕಿತ ಹಾಕಿದ್ದಾರೆ” ಎಂದೂ ಹೇಳಿದ್ದಾರೆ.
ರಾಜ್ಯದ ಹಕ್ಕುಗಳು ಹಾಗೂ ನೈಜ ಒಕ್ಕೂಟ ವ್ಯವಸ್ಥೆಯ ಪರವಾಗಿನ ಡಿಎಂಕೆ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿರುವ ಸ್ಟಾಲಿನ್, “ರಾಜಭವನವು ಮಸೂದೆಗಳನ್ನು ಕೊಲ್ಲಬಹುದು ಅಥವಾ ಹೂತು ಹಾಕಬಹುದು ಎಂಬ ರಾಜ್ಯಪಾಲ ರವಿಯವರ ‘ಪರಮಾಧಿಕಾರ’ ಪ್ರಮೇಯವನ್ನು ಗುರುವಾರದ ಸುಪ್ರೀಂ ಕೋರ್ಟ್ ತೀರ್ಪು ತಿರಸ್ಕರಿಸಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
“ನಾವು ನಮ್ಮ ಕಾನೂನು ಹೋರಾಟದ ಮೂಲಕ, ಶಾಸನಗಳ ಮೂಲಕ ಜನರ ಇಚ್ಛೆಯನ್ನು ಪ್ರತಿಫಲಿಸುವ ಮಸೂದೆಗಳ ಕುರಿತು ಉದ್ದೇಶಪೂರ್ವಕವಾಗಿ ನಿಷ್ಕ್ರಿಯತೆ ಪ್ರದರ್ಶಿಸುವ, ದೇಶಾದ್ಯಂತ ಚುನಾಯಿತ ಸರಕಾರದೊಂದಿಗೆ ವ್ಯತಿರಿಕ್ತವಾಗಿ ವರ್ತಿಸುತ್ತಿರುವ ತಮಿಳುನಾಡು ರಾಜ್ಯಪಾಲರೂ ಸೇರಿದಂತೆ ಎಲ್ಲ ರಾಜ್ಯಪಾಲರೂ ಕಾನೂನುಬದ್ಧವಾಗಿ ಕೆಲಸ ಮಾಡುವಂತೆ ಮಾಡಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಮಸೂದೆಗಳನ್ನು ವಿಲೇವಾರಿ ಮಾಡಲು ರಾಜ್ಯಪಾಲರಿಗೆ ಕಾಲಮಿತಿ ವಿಧಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವವರೆಗೂ ನಾನು ವಿರಮಿಸುವುದಿಲ್ಲ” ಎಂದೂ ಅವರು ಘೋಷಿಸಿದ್ದಾರೆ.







