ರೈತರ ಬೇಡಿಕೆ ಈಡೇರುವ ವರೆಗೆ ಅಮರಣಾಂತ ಉಪವಾಸ ಮುಷ್ಕರ ನಿಲ್ಲಿಸುವುದಿಲ್ಲ: ರೈತ ನಾಯಕ ದಲ್ಲೇವಾಲ್

ಜಗಜೀತ್ ಸಿಂಗ್ ದಲ್ಲೇವಾಲ್ | PC : PTI
ಚಂಡಿಗಢ: ರೈತರ ಬೇಡಿಕೆಗಳನ್ನು ಸರಕಾರ ಈಡೇರಿಸುವ ವರೆಗೆ ಅಮರಣಾಂತ ಉಪವಾಸ ಮುಷ್ಕರವನ್ನು ಮುಂದುವರಿಸಲಾಗುವುದು ಎಂದು ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಪುನರುಚ್ಚರಿಸಿದ್ದಾರೆ.
ತನ್ನ ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಮುಷ್ಕರದ 64ನೇ ದಿನವಾದ ಮಂಗಳವಾರ ಅವರು ಖನೌರಿ ಗಡಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ರೈತರ ಪ್ರತಿಭಟನೆ 2.0ರ ಮೊದಲ ವರ್ಷಾಚರಣೆಯ ದಿನವಾದ ಫೆಬ್ರವರಿ 12ರಂದು ಖನೌರಿ ಗಡಿ (ಪಂಜಾಬ್ ಹಾಗೂ ಹರ್ಯಾಣ ಗಡಿ)ಗೆ ಆಗಮಿಸುವಂತೆ ದೇಶಾದ್ಯಂತದ ರೈತರನ್ನು ಅವರು ಆಗ್ರಹಿಸಿದ್ದಾರೆ.
ಈ ಬೃಹತ್ ಸಭೆ ತನಗೆ ಶಕ್ತಿ ತುಂಬುತ್ತದೆ ಹಾಗೂ ಕೇಂದ್ರ ಸರಕಾರದ ನಿಯೋಗದೊಂದಿಗೆ ಮಾತುಕತೆಗಾಗಿ ಖುದ್ದಾಗಿ ಹಾಜರಾಗಲು ಶಕ್ತಿ ನೀಡುತ್ತದೆ ಎಂದು ತಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಸರಕಾರ ಫೆಬ್ರವರಿ 14ರಂದು ಮಾತುಕತೆಗೆ ಆಹ್ವಾನ ನೀಡಿದ ಬಳಿಕವೇ ತಾನು ವೈದ್ಯಕೀಯ ನೆರವು ಸ್ವೀಕರಿಸಲು ಒಪ್ಪಿಕೊಂಡೆ ಎಂದು ಡಲ್ಲೇವಾಲ್ ಹೇಳಿದ್ದಾರೆ.
ಮಾತುಕತೆಗಾಗಿ ಚಂಡಿಗಢಕ್ಕೆ ಖುದ್ದಾಗಿ ಭೇಟಿ ನೀಡಲು ಪ್ರಸಕ್ತ ತನ್ನ ಆರೋಗ್ಯ ಸ್ಪಂದಿಸುತ್ತಿಲ್ಲ. ತಾನು ಸಾಕಷ್ಟು ಆರೋಗ್ಯವಂತನಾದರೆ, ಚಂಡಿಗಢದ ಸಭೆಯಲ್ಲಿ ಪಾಲ್ಗೊಳ್ಳಲಿದ್ದೇನೆ. ಇಲ್ಲದೇ ಇದ್ದರೆ, ತಾನು ವೀಡಿಯೊ ಕಾನ್ಫರೆನ್ಸ್ ಮೂಲಕ ಸಮಿತಿಯ ಮುಂದೆ ಹಾಜರಾಗಾಲಿದ್ದೇನೆ ಎಂದು ಅವರು ಹೇಳಿದರು.
ಮೊಗಾದಲ್ಲಿ ರೈತರ ಮಹಾ ಪಂಚಾಯತ್ ಹಿನ್ನೆಲೆಯಲ್ಲಿ ಏಕತೆಯ ನಿರ್ಣಯದೊಂದಿಗೆ ಎಸ್ಕೆಎಂ ನಾಯಕರು ಖನೌರಿಗೆ ಆಗಮಿಸುವಂತೆ ಡಲ್ಲೇವಾಲ್ ಕರೆ ನೀಡಿದರು.







