ಅಕ್ಬರುದ್ದೀನ್ ಉವೈಸಿ ಬೋಧಿಸುವ ಪ್ರತಿಜ್ಞಾವಿಧಿ ಸ್ವೀಕರಿಸುವುದಿಲ್ಲ: ಬಿಜೆಪಿ ಶಾಸಕ ರಾಜಾ ಸಿಂಗ್

ಹೈದರಾಬಾದ್: ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಉವೈಸಿಯವರನ್ನು ತೆಲಂಗಾಣ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿರುವುದರಿಂದ ಅವರು ಬೋಧಿಸುವ ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವುದಿಲ್ಲ ಎಂದು ಘೋಷಮಹಲ್ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಘೋಷಿಸುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ರಾಜ್ಯಪಾಲರಾದ ತಮಿಳಿಸಾಯಿ ಸೌಂದರರಾಜನ್ ಅವರು ಅಕ್ಬರುದ್ದೀನ್ ಉವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದರು. ಇವರು ಶನಿವಾರ ಮುಂಜಾನೆ ಪ್ರತಿಜ್ಞಾವಿಧಿ ಸ್ವೀಕರಿಸಿ, ನೂತನವಾಗಿ ಆಯ್ಕೆಯಾದ ಎಲ್ಲ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸುವರು.
ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಕೂಡಾ ತಮ್ಮ ಹಿಂದಿನ ಮುಖ್ಯಮಂತ್ರಿಯಂತೆ ಎಐಎಂಐಎಂ ಬಗ್ಗೆ ಭೀತಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಅಕ್ಬರುದ್ದೀನ್ ಉವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ. ಆದ್ದರಿಂದ ಬಿಜೆಪಿ ಶಾಸಕರು ಅವರಿಂದ ಪ್ರತಿಜ್ಞಾವಿಧಿ ಸ್ವೀಕರಿಸುವುದಿಲ್ಲ ಎಂದು ರಾಜಾ ಸಿಂಗ್ ವೀಡಿಯೊ ತುಣುಕಿನಲ್ಲಿ ಹೇಳಿದ್ದಾರೆ.
ಪೂರ್ಣಾವಧಿ ಸ್ಪೀಕರ್ ನೇಮಕ ಮಾಡಿದ ಬಳಿಕವಷ್ಟೇ ತಾವು ಪ್ರಮಾಣ ವಚನ ಸ್ವೀಕರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. 2018ರಲ್ಲಿ ಎಐಎಂಐಎಂ ಪಕ್ಷಕ್ಕೆ ಸೇರಿದ ಹಂಗಾಮಿ ಸ್ಪೀಕರ್ ಇದ್ದ ಹಿನ್ನೆಲೆಯಲ್ಲಿ ರಾಜಾ ಸಿಂಗ್ ಪ್ರಮಾಣವಚನ ಸ್ವೀಕರಿಸಿರಲಿಲ್ಲ. ಶಿಷ್ಟಾಚಾರದಂತೆ ಅತ್ಯಂತ ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗುತ್ತದೆ. ಹಿಂದಿನ ಅವಿಭಜಿತ ಆಂಧ್ರಪ್ರದೇಶ ವಿಧಾನಸಭೆ ಸೇರಿದಂತೆ ಚಂದ್ರಯಾನಗುತ್ತ ಕ್ಷೇತ್ರದಿಂದ ಆರು ಬಾರಿ ಅಕ್ಬರುದ್ದೀನ್ ಆಯ್ಕೆಯಾಗಿದ್ದಾರೆ.
"ಕಾಂಗ್ರೆಸ್ ಪಕ್ಷದ ಎನ್.ಉತ್ತಮ್ಕುಮಾರ್ ರೆಡ್ಡಿ ಮತ್ತು ತುಮ್ಮಲ ನಾಗೇಶ್ವರ ಹಾಗೂ ಬಿಆರ್ಎಸ್ ನ ದನಮ್ ನಾಗೇಂದ್ರ ಮತ್ತು ತಲಸಾನಿ ಶ್ರೀನಿವಾಸ ಯಾದವ್ ಕೂಡಾ ಆರು ಬಾರಿ ಆಯ್ಕೆಯಾಗಿದ್ದಾರೆ. ಪೋಚರಾಮ ಶ್ರೀನಿವಾಸ ರೆಡ್ಡಿ ಕೂಡಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದವರು. ಆದರೆ ಅಕ್ಬರುದ್ದೀನ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ರಾಜಕೀಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಸಚಿವ ಡಿ.ಶ್ರೀಧರ್ಬಾಬು ಹೇಳಿದ್ದಾರೆ.







