ಕೆಲಸದ ಸ್ಥಳದ ಪೀಡನೆ ಉದ್ಯೋಗಿಗಳ ಸೃಜನಶೀಲ ಚಿಂತನೆಗೆ ಅಡ್ಡಿ: IIM ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ
ಮುಂಬೈ, ಆ. 17: ಕೆಲಸದ ಸ್ಥಳದಲ್ಲಿ ಪೀಡಿಸುವುದು, ಕಡೆಗಣಿಸುವುದು, ಅವಮಾನಿಸುವುದು ಅಥವಾ ಕೆಟ್ಟದಾಗಿ ನಡೆಸಿಕೊಳ್ಳುವಂತಹ ನಕಾರಾತ್ಮಕ ನಡವಳಿಕೆ ಸೃಜನ ಶೀಲ ಚಿಂತನೆಗೆ ಅಡ್ಡಿಯಾಗುತ್ತದೆ ಹಾಗೂ ಉದ್ಯೋಗಿಗಳು ತಮ್ಮ ಆಶಕ್ತಿಯ ನವೀನ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಲಕ್ನೋದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಅಧ್ಯಯನ ತಿಳಿಸಿದೆ.
ಅನೇಕ ಸಂಸ್ಥೆಗಳಲ್ಲಿ ಉದ್ಯೋಗಿಗಳು ಆಡಳಿತದ ಗಮನಕ್ಕೆ ಬರದಂತೆ ಕೆಲಸದಲ್ಲಿ ತಮ್ಮದೇ ಆದ ಅಲೋಚನೆಗಳನ್ನು ಅಭಿವೃದ್ಧಿಪಡಿಸುತ್ತಾರೆ. ಅದು ಗಮನಾರ್ಹ ಫಲಿತಾಂಶವನ್ನು ನೀಡಲು ಸಿದ್ಧವಾದ ನಂತರ ಅವರು ಅದನ್ನು ಆಡಳಿತದ ಮುಂದೆ ಪ್ರಸ್ತುತಪಡಿಸುತ್ತಾರೆ. ಇದು ವ್ಯವಹಾರ ಯಶಸ್ವಿಗೆ ಕಾರಣವಾಗುತ್ತದೆ ಎಂದು ವರದಿ ಹೇಳಿದೆ.
ಸಂಶೋಧಕರು ದತ್ತಾಂಶವನ್ನು ಸಂಗ್ರಹಿಸಲು ಪರಿಮಾಣಾತ್ಮಕ ಹಾಗೂ ಗುಣಾತ್ಮಕ ವಿಧಾನವನ್ನು ಬಳಸಿದ್ದಾರೆ.
ಸಂಶೋಧನೆಯ ಪ್ರಾಯೋಗಿಕ ಸನ್ನಿವೇಶ ಆಧಾರಿತ ಭಾಗದಲ್ಲಿ ತಂಡ 112 ಭಾಗೀದಾರರಿಂದ ಮಾಹಿತಿಯನ್ನು ಸಂಗ್ರಹಿಸಿದೆ. ಸಂಶೋಧನೆಯ ಸಮೀಕ್ಷೆ ಆಧಾರಿತ ಭಾಗದಲ್ಲಿ ಐಟಿ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 313 ಉದ್ಯೋಗಿಗಳಿಂದ ಮಾಹಿತಿಯನ್ನು ಸಂಗ್ರಹಿಸಿದೆ.
ಕೆಲಸದ ಸ್ಥಳದಲ್ಲಿ ಉದ್ಯೋಗಿಗಳನ್ನು ನಡೆಸಿಕೊಳ್ಳುವ ರೀತಿಯು ಅವರ ಸೃಜನಶೀಲ ಸಾಮರ್ಥ್ಯವನ್ನು ಹೇಗೆ ನಾಶಪಡಿಸಬಹುದು ಎಂಬುದರ ಬಗ್ಗೆ ಈ ಅಧ್ಯಯನ ಬೆಳಕು ಚೆಲ್ಲುತ್ತದೆ. ಉದ್ಯೋಗಿಗಳ ನಿಜವಾದ ನಾವಿನ್ಯತೆಯನ್ನು ಹೊರ ತೆಗೆಯಲು ಬೆಂಬಲಿಸುವ, ಗೌರವಿಸುವ ಹಾಗೂ ಮುಕ್ತ ಮಾತುಕತೆಯ ವಾತಾವರಣ ಸೃಷ್ಟಿಸಬೇಕು ಎಂದು ಲಕ್ನೋ ಐಐಎಂನ ಪಿಎಚ್ಡಿ ವಿದ್ಯಾರ್ಥಿ ರಿಷಬ್ ಚೌಹಾಣ್ ತಿಳಿಸಿದ್ದಾರೆ.







