ವಿಶ್ವಕಪ್: ಅಭ್ಯಾಸದ ವೇಳೆ ಸೂರ್ಯಕುಮಾರ್ ಯಾದವ್ ಗೆ ಗಾಯ, ಇಶಾನ್ ಕಿಶನ್ ಗೆ ಜೇನುನೊಣ ದಾಳಿ

Photo- PTI
ಹೊಸದಿಲ್ಲಿ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಾಲುನೋವಿಗೆ ಒಳಗಾಗಿ ನ್ಯೂಝಿಲ್ಯಾಂಡ್ ವಿರುದ್ಧದ ವಿಶ್ವಕಪ್ ಪಂದ್ಯದಿಂದ ಹೊರಗುಳಿದ ನಂತರ ಇದೀಗ ಭಾರತದ ಇನ್ನೊರ್ವ ಆಟಗಾರ ಸೂರ್ಯಕುಮಾರ್ ಯಾದವ್ ರವಿವಾರ ಧರ್ಮಶಾಲಾದಲ್ಲಿ ಅಭ್ಯಾಸ ನಿರತರಾಗಿದ್ದಾಗ ಗಾಯಗೊಂಡಿದ್ದಾರೆ.
ನೆಟ್ನಲ್ಲಿ ಪ್ರಾಕ್ಟೀಸ್ ವೇಳೆ ಥ್ರೋಡೌನ್ ಸ್ಪೆಷಲಿಷ್ಟ್ನನ್ನು ಸೂರ್ಯಕುಮಾರ್ ಎದುರಿಸಿದಾಗ ಚೆಂಡು ಅವರ ಮೊಣಕೈಗೆ ಅಪ್ಪಳಿಸಿದೆ.
ಸೂರ್ಯ ವಿಪರೀತ ನೋವಿಗೆ ಒಳಗಾಗಿದ್ದು, ಪ್ರಾಕ್ಟೀಸ್ ಸೆಶನ್ ಅನ್ನು ತೊರೆದಿದ್ದಾರೆ.
ಮುಂಬೈ ಬ್ಯಾಟರ್ ಸೂರ್ಯಕುಮಾರ್ ಈ ವರ್ಷ 14 ಏಕದಿನ ಪಂದ್ಯಗಳನ್ನು ಆಡಿದ್ದು 13 ಇನಿಂಗ್ಸ್ಗಳಲ್ಲಿ ಎರಡು ಅರ್ಧಶತಕಗಳ ಸಹಿತ ಒಟ್ಟು 283 ರನ್ ಗಳಿಸಿದ್ದಾರೆ. ಗರಿಷ್ಠ 72 ರನ್ ಗಳಿಸಿದ್ದಾರೆ.
ಭಾರತದ ವಿಕೆಟ್ಕೀಪರ್ ಇಶಾನ್ ಕಿಶನ್ ಅಭ್ಯಾಸ ಮಾಡುವಾಗ ಜೇನುಹುಳವೊಂದು ಅವರ ಕುತ್ತಿಗೆಯ ಹಿಂಭಾಗದಲ್ಲಿ ಕಚ್ಚಿದ್ದು, ಇದರಿಂದಾಗಿ ಕಿಶನ್ ಅಭ್ಯಾಸದಿಂದ ಹೊರಗುಳಿಯಬೇಕಾಯಿತು. ಆದಾಗ್ಯೂ ಅವರೀಗ ಚೇತರಿಸಿಕೊಂಡಿದ್ದಾರೆ.
ಈ ವರ್ಷ 17 ಏಕದಿನ ಪಂದ್ಯಗಳನ್ನು ಆಡಿರುವ ಕಿಶನ್ 35.07ರ ಸರಾಸರಿಯಲ್ಲಿ ಒಟ್ಟು 456 ರನ್ ಗಳಿಸಿದ್ದಾರೆ. 15 ಇನಿಂಗ್ಸ್ಗಳಲ್ಲಿ 4 ಅರ್ಧಶತಕಗಳನ್ನು ಗಳಿಸಿರುವ ಅವರು ಗರಿಷ್ಠ ಸ್ಕೋರ್ 82 ಆಗಿದೆ.





