ವಿಶ್ವ ಪರಿಸರ ದಿನಾಚರಣೆ: ತಮ್ಮ ನಿವಾಸದ ಉದ್ಯಾನವನದಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ

ನರೇಂದ್ರ ಮೋದಿ | PC : PTI
ಹೊಸದಿಲ್ಲಿ: 1971ರ ಯುದ್ಧದಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದ ಮಹಿಳೆಯರ ಗುಂಪೊಂದು ತಮಗೆ ಉಡುಗೊರೆ ನೀಡಿದ್ದ ಸಿಂಧೂರ ಸಸಿಯೊಂದನ್ನು ವಿಶ್ವ ಪರಿಸರ ದಿನವಾದ ಇಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸ ಉದ್ಯಾನವನದಲ್ಲಿ ನೆಟ್ಟು, ನೀರೆರೆದಿದ್ದಾರೆ. ಇತ್ತೀಚಿನ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಗೌರವಾರ್ಥ ಈ ಸಸಿಯನ್ನು ನೆಡಲಾಗಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಈ ಸಸಿಯು ದೇಶದ ಮಹಿಳೆಯರ ಶೌರ್ಯ ಹಾಗೂ ಸ್ಪೂರ್ತಿಯ ಬಲವಾದ ಸಂಕೇತವಾಗಿ ಉಳಿಯಲಿದೆ" ಎಂದು ಹೇಳಿದ್ದಾರೆ.
ಇತ್ತೀಚೆಗೆ ತಾವು ಗುಜರಾತ್ನ ಕಛ್ಗೆ ಭೇಟಿ ನೀಡಿದ್ದ ವೇಳೆ, 1971ರ ಯುದ್ಧದಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದ ಮಹಿಳೆಯರ ಗುಂಪೊಂದು ನನ್ನನ್ನು ಭೇಟಿಯಾಗಿ, ನನಗೆ ಸಿಂಧೂರ ಸಸಿಗಳನ್ನು ಉಡುಗೊರೆಯಾಗಿ ನೀಡಿತ್ತು ಎಂದು ಅವರು ಸ್ಮರಿಸಿದ್ದಾರೆ.
ಈ ನಡುವೆ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಕ್ಸ್ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, "ಜಾಗತಿಕ ಹವಾಮಾನದ ರಕ್ಷಣೆಗಾಗಿ ಪ್ರತಿಯೊಂದು ದೇಶವೂ ತನ್ನ ಸ್ವ ಹಿತಾಸಕ್ತಿಯನ್ನು ಮೀರಿ ನಿಲ್ಲಬೇಕಿದೆ" ಎಂದು ಕರೆ ನೀಡಿದ್ದಾರೆ.







