ವಿಶ್ವದ ನಂ.1 ಆಟಗಾರ್ತಿ ಸ್ವಿಯಾಟೆಕ್ ಗೆ ಶಾಕ್ ನೀಡಿದ ಲಿಂಡಾ ನೊಸ್ಕೋವಾ
ಲಿಂಡಾ ನೊಸ್ಕೋವಾ |Photo: @josemorgado \X
ಮೆಲ್ಬರ್ನ್: ಝೆಕ್ ಗಣರಾಜ್ಯದ ಲಿಂಡಾ ನೊಸ್ಕೋವಾ ವಿರುದ್ಧ ಆಘಾತಕಾರಿ ಸೋಲನುಭವಿಸಿದ ಅಗ್ರ ಶ್ರೇಯಾಂಕಿತೆ ಹಾಗೂ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಮೆಲ್ಬರ್ನ್ ಪಾರ್ಕ್ನಲ್ಲಿ ಚೊಚ್ಚಲ ಪ್ರಶಸ್ತಿ ಹಾಗೂ ಒಟ್ಟಾರೆ ಐದನೇ ಗ್ರ್ಯಾನ್ಸ್ಲಾಮ್ ಟ್ರೋಫಿಯ ನಿರೀಕ್ಷೆಯಲ್ಲಿದ್ದ ಸ್ವಿಯಾಟೆಕ್ 19ರ ಹರೆಯದ ನೊಸ್ಕೋವಾ ವಿರುದ್ಧ 6-3, 3-6, 4-6 ಸೆಟ್ ಗಳ ಅಂತರದಿಂದ ಸೋತಿದ್ದಾರೆ.
ಈ ಆಘಾತಕಾರಿ ಸೋಲಿನೊಂದಿಗೆ ಸ್ವಿಯಾಟೆಕ್ ಅವರ ಸತತ 18 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.
ಪೋಲ್ಯಾಂಡ್ ಆಟಗಾರ್ತಿ ಸ್ವಿಯಾಟೆಕ್ ಮೊದಲ ಸೆಟ್ಟನ್ನು 6-3 ಅಂತರದಿಂದ ಜಯಿಸಿದಾಗ ಅಂತಿಮ-16 ಸುತ್ತು ತಲುಪುವ ವಿಶ್ವಾಸ ಮೂಡಿಸಿದ್ದರು. ಆದರೆ ಅವರು ತನ್ನ ಲಯ ಕಳೆದುಕೊಂಡರು. ವಿಶ್ವದ ನಂ.50ನೇ ಆಟಗಾರ್ತಿ ನೊಸ್ಕೋವಾ ಎರಡು ಗಂಟೆ, 20 ನಿಮಿಷಗಳ ಹೋರಾಟದಲ್ಲಿ ಮುಂದಿನ ಎರಡು ಸೆಟ್ ಗಳನ್ನು 6-3, 6-4 ಅಂತರದಿಂದ ಜಯಿಸಿ ಪಂದ್ಯದಲ್ಲಿ ಜಯಶಾಲಿಯಾದರು.
ಸ್ವಿಯಾಟೆಕ್ ಸೋತ ನಂತರ ಮೊದಲ ವಾರಾಂತ್ಯದಲ್ಲಿ ಮೆಲ್ಬರ್ನ್ನಲ್ಲಿ ಕೇವಲ ಮೂವರು ಅಗ್ರ-10 ಶ್ರೇಯಾಂಕಿತ ಆಟಗಾರ್ತಿಯರು ಕಣದಲ್ಲಿ ಉಳಿದಿದ್ದಾರೆ.
ನನಗೆ ಮಾತುಗಳು ಬರುತ್ತಿಲ್ಲ. ಇದೊಂದು ಅದ್ಭುತ ಪಂದ್ಯವಾಗಲಿದೆ ಎಂದು ಗೊತ್ತಿತ್ತು. ಆದರೆ ಈ ರೀತಿ ಅಂತ್ಯವಾಗುತ್ತದೆ ಎಂದು ನಿಜವಾಗಿಯೂ ಯೋಚಿಸಿರಲಿಲ್ಲ. 4ನೇ ಸುತ್ತಿಗೆ ತಲುಪಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಆಡುತ್ತಿರುವ ನೊಸ್ಕೋವಾ ಹೇಳಿದ್ದಾರೆ.
ನೊಸ್ಕೋವಾ ಮುಂದಿನ ಸುತ್ತಿನಲ್ಲಿ ಉಕ್ರೇನ್ನ 19ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಅಥವಾ ಸ್ವಿಸ್ ಆಟಗಾರ್ತಿ ವಿಕ್ಟರಿಜಾ ಗೊಲುಬಿಕ್ ಸವಾಲನ್ನು ಎದುರಿಸಲಿದ್ದಾರೆ.