ವರ್ಲಿ ಕಾರು ಅಪಘಾತ | ಶಿವಸೇನೆ ನಾಯಕ ಮಗನ ಬಂಧನ
PC : PTI
ಮುಂಬೈ : ಮುಂಬೈಯ ವರ್ಲಿಯಲ್ಲಿ ತನ್ನ ಬಿಎಮ್ಡಬ್ಲ್ಯು ಕಾರ್ ಢಿಕ್ಕಿ ಹೊಡೆಸಿ ಒರ್ವ ಮಹಿಳೆಯ ಸಾವಿಗೆ ಕಾರಣನಾಗಿರುವ ಶಿವಸೇನಾ ನಾಯಕರೊಬ್ಬರ ಮಗ ಮಿಹಿರ್ ಶಾನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆತನನ್ನು ಥಾಣೆಯ ಶಾಪುರದಲ್ಲಿ ಬಂಧಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇತರ 12 ಮಂದಿಯನ್ನೂ ಬಂಧಿಸಿದ್ದಾರೆ.
ಶಿವಸೇನಾ ನಾಯಕ ರಾಜೇಶ್ ಶಾರ ಮಗ 24 ವರ್ಷದ ಮಿಹಿರ್ ಶಾ ಚಲಾಯಿಸುತ್ತಿದ್ದ ಕಾರು ರವಿವಾರ ಬೆಳಗ್ಗೆ ವರ್ಲಿಯಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಢಿಕ್ಕಿ ಹೊಡೆದಿತ್ತು. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಕಾವೇರಿ ನಖ್ವ (45) ಮೃತಪಟ್ಟರೆ, ಅವರ ಗಂಡ ಪ್ರದೀಪ್ ಗಾಯಗೊಂಡಿದ್ದಾರೆ.
ಅಂದಿನಿಂದ ಮಿಹಿರ್ ಶಾ ತಲೆತಪ್ಪಿಸಿಕೊಂಡಿದ್ದಾನೆ. ಅವನನ್ನು ಬಂಧಿಸಲು ಮುಂಬೈ ಪೊಲೀಸರು ಆರು ತಂಡಗಳನ್ನು ರಚಿಸಿದ್ದರು. ಅವನು ದೇಶ ತೊರೆಯದಂತೆ ತಡೆಯಲು ಆತನ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು.
‘‘ನನ್ನ ಹೆಂಡತಿಯು ಕಾರಿನ ಚಕ್ರಕ್ಕೆ ಸಿಲುಕಿದ್ದರು, ಬಾನೆಟ್ ಮೇಲಲ್ಲ. ಮಿಹಿರ್ ಕಾರನ್ನು ಹಿಂದಕ್ಕೆ ಚಲಾಯಿಸಬೇಕಾಗಿತ್ತು. ಆದರೆ, ಅವನು ಹಾಗೆ ಮಾಡಲಿಲ್ಲ. ಕಾರು ನಿಲ್ಲಿಸುವಂತೆ ನಾನು ಕೂಗುತ್ತಿದ್ದೆ. ಆದರೆ, ಅವನು ನನ್ನ ಮಾತು ಕೇಳಲಿಲ್ಲ’’ ಎಂದು ಮೃತ ಮಹಿಳೆಯ ಗಂಡ ಪ್ರದೀಪ್ ಸುದ್ದಿ ಚಾನೆಲೊಂದರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.