ಛತ್ರಸಾಲ್ ಕ್ರೀಡಾಂಗಣದಲ್ಲಿ ಹತ್ಯೆ ಪ್ರಕರಣ | ಕುಸ್ತಿಪಟು ಸುಶೀಲ್ ಕುಮಾರ್ಗೆ ಹೈಕೋರ್ಟ್ ಜಾಮೀನು

Photo Credit: Sushil Kumar Verma
ಹೊಸದಿಲ್ಲಿ: ದಿಲ್ಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಮಾಜಿ ಕಿರಿಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನ್ಕರ್ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್ಗೆ ದಿಲ್ಲಿ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ಸುಶೀಲ್ ಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದರು. ಅಲ್ಲದೆ, 50 ಸಾವಿರ ವೈಯುಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಎರಡು ಶ್ಯೂರಿಟಿಗಳನ್ನು ಸಲ್ಲಿಸುವಂತೆ ಅವರಿಗೆ ನಿರ್ದೇಶಿಸಿದರು.
ಆಸ್ತಿ ವಿವಾದದಕ್ಕೆ ಸಂಬಂಧಿಸಿ ಸುಶೀಲ್ ಕುಮಾರ್ ಹಾಗೂ ಇತರ ಆರೋಪಿಗಳು ಧನ್ಕರ್ ಹಾಗೂ ಅವರ ಗೆಳೆಯರಿಗೆ 2021 ಮೇಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿ ಮೊಂಡಾದ ಆಯುಧದಿಂದ ಹೊಡೆದ ಪರಿಣಾಮ ಧನ್ಕರ್ ಅವರ ಮೆದುಳಿಗೆ ಹಾನಿ ಉಂಟಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು.
ಸುಶೀಲ್ ಕುಮಾರ್ ಅವರನ್ನು ಪ್ರತಿನಿಧಿಸಿದ್ದ ಆರ್.ಕೆ. ಮಲಿಕ್, ಸುಶೀಲ್ ಕುಮಾರ್ ಅವರು ಮೂರುವರೆ ವರ್ಷಗಳಿಂದ ಕಾರಾಗೃಹದಲ್ಲಿದ್ದಾರೆ. ಪ್ರಾಸಿಕ್ಯೂಷನ್ 200 ಸಾಕ್ಷಿಗಳನ್ನು ಉಲ್ಲೇಖಿಸಿದೆ. ಆದರೆ, ಇದುವರೆಗೆ ಕೇವಲ 31 ಸಾಕ್ಷಿಯನ್ನು ಮಾತ್ರ ಪರಿಶೀಲನೆಗೆ ಒಳಪಡಿಸಿದೆ ಎಂದು ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಜಾಮೀನು ಅರ್ಜಿಯನ್ನು ವಿರೋಧಿಸಿದಾಗ, ಮಲಿಕ್, ವಿಚಾರಣೆ ಪೂರ್ಣವಾಗಲು ದೀರ್ಘ ಸಮಯ ತೆಗೆದುಕೊಳ್ಳಬಹುದು. ವಿಳಂಬದ ಕಾರಣ ಸುಶೀಲ್ ಕುಮಾರ್ ಅವರಿಗೆ ಜಾಮೀನು ನೀಡಬೇಕು ಎಂದು ಕೋರಿದರು.







