ಕಾನೂನುಬಾಹಿರ ವಿಷಯ ಪೋಸ್ಟ್ ಮಾಡುವ ಖಾತೆಗಳ ಶಾಶ್ವತ ಅಮಾನತಿಗೆ X ಸಜ್ಜು

ಎಲಾನ್ ಮಸ್ಕ್ | Photo Credit : PTI
ಹೊಸದಿಲ್ಲಿ, ಜ. 4: ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕುವ, ಅಂತಹ ಪೋಸ್ಟ್ ಗಳನ್ನು ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸುವ ಮತ್ತು ಅಗತ್ಯವಿದ್ದರೆ ಸ್ಥಳೀಯ ಸರಕಾರಗಳು ಹಾಗೂ ಕಾನೂನು ಜಾರಿ ಏಜೆನ್ಸಿಗಳೊಂದಿಗೆ ಕೆಲಸ ಮಾಡುವ ಮೂಲಕ ಅಂತಹ ವಿಷಯಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ವೇದಿಕೆ ರವಿವಾರ ತಿಳಿಸಿದೆ.
ಕಾನೂನುಬಾಹಿರ ವಿಷಯವನ್ನು ಸೃಷ್ಟಿಸಲು ವೇದಿಕೆಯ ಕೃತಕ ಬುದ್ಧಿಮತ್ತೆ (AI) ಸೇವೆ ‘ಗ್ರೋಕ್’ ಅನ್ನು ಬಳಸುವವರು ಮಕ್ಕಳ ಲೈಂಗಿಕ ಶೋಷಣೆ ಸೇರಿದಂತೆ ಕಾನೂನುಬಾಹಿರ ವಿಷಯವನ್ನು ಪೋಸ್ಟ್ ಮಾಡುವವರಂತೆಯೇ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಕ್ಸ್ನ ಗ್ಲೋಬಲ್ ಗವರ್ನ್ಮೆಂಟ್ ಅಫೇರ್ಸ್ (ಜಿಜಿಎ) ಖಾತೆ ಎಚ್ಚರಿಕೆ ನೀಡಿದೆ.
‘ಅನುಚಿತ ಚಿತ್ರಗಳ’ ಕುರಿತು ಪೋಸ್ಟ್ಗೆ ಪ್ರತಿಕ್ರಿಯಿಸಿದ್ದ ಮಸ್ಕ್ ಎಕ್ಸ್ನಲ್ಲಿ ಇದೇ ರೀತಿಯ ಎಚ್ಚರಿಕೆಯನ್ನು ನೀಡಿದ್ದು, ಜಿಜಿಎ ತನ್ನ ಹೇಳಿಕೆಯಲ್ಲಿ ಮಸ್ಕ್ ನಿಲುವನ್ನು ಪುನರುಚ್ಚರಿಸಿದೆ.
ಜಿಜಿಎ ಹ್ಯಾಂಡಲ್ ಎಕ್ಸ್ ನಿಯಮಗಳಿಗೆ ಲಿಂಕ್ವೊಂದನ್ನು ಹಂಚಿಕೊಂಡಿದೆ. ಪರಸ್ಪರ ಸಮ್ಮತಿಯೊಂದಿಗೆ ನಿರ್ಮಿಸಲಾದ ಮತ್ತು ವಿತರಿಸಲಾದ ವಯಸ್ಕರ ನಗ್ನತೆ ಅಥವಾ ಲೈಂಗಿಕ ನಡವಳಿಕೆಯ ವಿಷಯವನ್ನು, ಅದನ್ನು ಸೂಕ್ತವಾಗಿ ಉಲ್ಲೇಖ ಮಾಡಿದ್ದರೆ ಮತ್ತು ಪ್ರಮುಖವಾಗಿ ಪ್ರದರ್ಶಿಸದಿದ್ದರೆ, ಹಂಚಿಕೊಳ್ಳಲು ಈ ನಿಯಮಗಳು ಅನುಮತಿಸುತ್ತವೆ.
ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸುವ ಅಸಭ್ಯ, ಅಶ್ಲೀಲ ಮತ್ತು ಇತರ ಕಾನೂನುಬಾಹಿರ ವಿಷಯಗಳನ್ನು ಎಕ್ಸ್ನಲ್ಲಿ ಅಪ್ಲೋಡ್ ಮಾಡುತ್ತಿರುವುದನ್ನು ಭಾರತ ಸರಕಾರ ಆಕ್ಷೇಪಿಸಿತ್ತು.
ಜ. 2ರಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು, ವಿಶೇಷವಾಗಿ AI ಆ್ಯಪ್ ಗ್ರೋಕ್ ನಿಂದ ರಚಿತ ಎಲ್ಲ ಅಸಭ್ಯ, ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯಗಳನ್ನು ತಕ್ಷಣ ತೆಗೆದುಹಾಕುವಂತೆ, ಇಲ್ಲದಿದ್ದರೆ ಕಾನೂನಿನಡಿ ಕ್ರಮ ಎದುರಿಸುವಂತೆ ಎಕ್ಸ್ಗೆ ತಾಕೀತು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಸ್ಕ್ ಮತ್ತು ಜಿಜಿಎ ಹೇಳಿಕೆಗಳು ಹೊರಬಿದ್ದಿವೆ.
ಆಕ್ಷೇಪಾರ್ಹ ವಿಷಯ, ಬಳಕೆದಾರರು ಮತ್ತು ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಚಿವಾಲಯವು ಎಕ್ಸ್ ಗೆ ನಿರ್ದೇಶನ ನೀಡಿತ್ತು.
ಆದೇಶ ಹೊರಡಿಸಿದ ದಿನಾಂಕದಿಂದ 72 ಗಂಟೆಗಳಲ್ಲಿ ವಿವರವಾದ ಕ್ರಮಾನುಷ್ಠಾನ ವರದಿಯನ್ನು ಸಲ್ಲಿಸುವಂತೆ ಸಚಿವಾಲಯವು ಅಮೆರಿಕ ಮೂಲದ ಎಕ್ಸ್ ಗೆ ಸೂಚಿಸಿತ್ತು.







