ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಗಳ X ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಭಾರತದಲ್ಲಿ ನಿರ್ಬಂಧ

ಕ್ಯಾಲಿಫೋರ್ನಿಯಾ: ಅಮೆರಿಕಾ ಮೂಲದ ಮಾನವ ಹಕ್ಕು ಸಂಘಟನೆಗಳಾದ ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಹಾಗೂ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ನ x ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ ಎಂದು scroll.in ವರದಿ ಮಾಡಿದೆ.
ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ ಈ ಎರಡು ಸಂಘಟನೆಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು x ಸಾಮಾಜಿಕ ಮಾಧ್ಯಮ ಹೇಳಿಕೆ ನೀಡಿದೆ.
ಯಾವ ಆಧಾರದಲ್ಲಿ ಈ ಎರಡು ಸಂಘಟನೆಗಳ ಖಾತೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ ಎಂಬ ಕುರಿತು ಈವರೆಗೆ ಸ್ಪಷ್ಟವಾಗದಿದ್ದರೂ, “ನಮ್ಮ ಖಾತೆಯಲ್ಲಿನ ವಿಷಯಗಳು ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಅನ್ನು ಉಲ್ಲಂಘಿಸುವಂತಿರುವುದರಿಂದ ಆ ವಿಷಯಗಳನ್ನು ತೆಗೆದು ಹಾಕುವಂತೆ ನಮಗೆ ಭಾರತ ಸರ್ಕಾರದಿಂದ ಕಾನೂನು ಆಗ್ರಹ ಬಂದಿದೆ” ಎಂದು x ಸಾಮಾಜಿಕ ಮಾಧ್ಯಮ ತಿಳಿಸಿರುವುದಾಗಿ ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ತಿಳಿಸಿದೆ.
ಆದರೆ, ಯಾವ ವಿಷಯಗಳ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆ ಉಲ್ಲೇಖಿಸಿದೆ ಎಂಬ ಕುರಿತು ಈ ಸಂಘಟನೆಯು ಯಾವುದೇ ವಿವರಗಳನ್ನು ಒದಗಿಸಿಲ್ಲ.
ಒಂದು ವೇಳೆ ರಾಷ್ಟ್ರದ ಭದ್ರತೆ, ಸಮಗ್ರತೆ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವಂತಿದ್ದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ರ ಅಡಿ ಕೇಂದ್ರ ಸರ್ಕಾರವು x ನಂತಹ ಮಧ್ಯಸ್ಥ ಅಂತರ್ಜಾಲ ತಾಣಗಳಿಗೆ ಅಂತಹ ವಿಷಯಗಳನ್ನು ನಿರ್ಬಂಧಿಸುವಂತೆ ಆದೇಶಿಸಬಹುದಾಗಿದೆ.
ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಹಾಗೂ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಗಳು ಲಾಭರಹಿತ ಸಂಘಟನೆಗಳಾಗಿದ್ದು, ಈ ಎರಡು ಸಂಘಟನೆಗಳು ಕ್ರಮವಾಗಿ ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಭಾರತದಲ್ಲಿನ ಜಾತಿ ತಾರತಮ್ಯದ ಕುರಿತು ಧ್ವನಿ ಎತ್ತುತ್ತಾ ಬಂದಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ನ ಕಾರ್ಯಕಾರಿ ನಿರ್ದೇಶಕ ರಶೀದ್ ಅಹಮದ್, “ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಧ್ವನಿಯನ್ನು ಅಡಗಿಸುವುದು ನಮ್ಮ ಸಂಘಟನೆಯ ಮೇಲಿನ ದಾಳಿ ಮಾತ್ರವಾಗಿರದೆ, ಅಮೆರಿಕಾ ಮತ್ತು ಭಾರತದಲ್ಲಿನ ಪ್ರಜಾಪ್ರಭುತ್ವದ ಮೇಲಿನ ದಾಳಿಯೂ ಆಗಿದೆ” ಎಂದು ಕಿಡಿ ಕಾರಿದ್ದಾರೆ.







