ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ ಮೂವರು ಎಸ್ಪಿ ಶಾಸಕರಿಗೆ ವೈ ಭದ್ರತೆ

Photo:TOI
ಲಕ್ನೋ: ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿಯ ಪರ ಮತ ಚಲಾಯಿಸಿದ ಸಮಾಜವಾದಿ ಪಕ್ಷದ ಮೂವರು ಶಾಸಕರಿಗೆ ಉತ್ತರ ಪ್ರದೇಶ ಸರ್ಕಾರ ವೈ ಶ್ರೇಣಿ ಭದ್ರತೆ ನೀಡಿದೆ.
ರಾಜ್ಯಸಭಾ ಚುನಾವಣೆಗೆ ಕೆಲವೇ ಗಂಟೆ ಮೊದಲು ಸಮಾಜವಾದಿ ಪಕ್ಷದ ಮುಖ್ಯ ಸಚೇತಕ ಹುದ್ದೆಗೆ ರಾಜೀನಾಮೆ ನೀಡಿದ್ದ ಉಂಚಹಾರ್ ಶಾಸಕ ಮನೋಜ್ ಪಾಂಡೆಯವರಿಗೆ ವೈ ಪ್ಲಸ್ ಭದ್ರತೆ ನೀಡಲಾಗಿದ್ದರೆ, ರಾಕೇಶ್ ಪ್ರದೀಪ್ (ಗೌರಿಗಂಜ್) ಮತ್ತು ವಿನೋದ್ ಚತುರ್ವೇದಿ (ಕಲ್ಪಿ) ಅವತರಿಗೆ ವೈ ಶ್ರೇಣಿ ಭದ್ರತೆ ನೀಡಲಾಗಿದೆ.
ಪಾಂಡೆಯವರ ಭದ್ರತಾ ವ್ಯವಸ್ಥೆಗೆ ಇಬ್ಬರು ಸಿಆರ್ ಪಿಎಫ್ ಕಮಾಂಡೊಗಳನ್ನು ನಿಯೋಜಿಸಲಾಗಿದ್ದು, ಇತರ ಇಬ್ಬರು ಶಾಸಕರು ತಲಾ ಒಬ್ಬರು ಸಿಆರ್ ಪಿಎಫ್ ಸಿಬ್ಬಂದಿಯ ನೆರವು ಪಡೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವೈ ಪ್ಲಸ್ ಭದ್ರತೆ ಹೊಂದಿರುವ ಪಾಂಡೆ ಒಟ್ಟು 11 ಮಂದಿ ಸಿಬ್ಬಂದಿಯನ್ನು ಹೊಂದಿದ್ದು, ಇವರಲ್ಲಿ ಇಬ್ಬರು ಕಮಾಂಡೊಗಳು ಮತ್ತು ಪೊಲೀಸರು ಸೇರಿದ್ದಾರೆ. ವೈ ಶ್ರೇಣಿ ಭದ್ರತೆಗೆ ಎಂಟು ಮಂದಿ ಸಿಬ್ಬಂದಿ ಇದ್ದು, ಒಬ್ಬರು ಸಿಆರ್ ಪಿಎಫ್ ಕಮಾಂಡೊ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







