ಅಕ್ರಮ ಗಣಿಗಾರಿಕೆಗಾಗಿ ಯಮುನೆಗೆ ಒಡ್ಡು: ವರದಿ ಕೇಳಿದ ಸುಪ್ರೀಂ

ಸುಪ್ರೀಂ | PTI
ಹೊಸದಿಲ್ಲಿ: ಅಕ್ರಮ ಗಣಿಗಾರಿಕೆಗೆ ಅನುಕೂಲವಾಗುವಂತೆ ಹರ್ಯಾಣದ ಕಲೇಸರ ವನ್ಯಜೀವಿ ಅಭಯಾರಣ್ಯದ ಬಳಿ ಯಮುನಾ ನದಿಗೆ ಒಡ್ಡು ನಿರ್ಮಿಸಲಾಗಿದೆ ಎಂದು ಅರ್ಜಿಯೊಂದರಲ್ಲಿ ಮಾಡಲಾಗಿರುವ ಆರೋಪವನ್ನು ಪರಿಶೀಲಿಸುವಂತೆ ಕೇಂದ್ರೀಯ ಅಧಿಕಾರಯುತ ಸಮಿತಿ(ಸಿಇಸಿ)ಗೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿದೆ.
ಯಮುನಾ ನಗರದ ಪೂರ್ವ ಭಾಗದಲ್ಲಿರುವ ಕಲೇಸರ ವನ್ಯಜೀವಿ ಅಭಯಾರಣ್ಯದಲ್ಲಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ ಎಂದು ಅರ್ಜಿದಾರರು ತನ್ನ ಅರ್ಜಿಯಲ್ಲಿ ಒತ್ತಿ ಹೇಳಿದ್ದಾರೆ.
ಸಿಇಸಿ ಈ ಸಮಸ್ಯೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಆಗಸ್ಟಿನ್ ಜಾರ್ಜ್ ಅವರ ಪೀಠವು ತನ್ನ ಎ.29ರ ಆದೇಶದಲ್ಲಿ ತಿಳಿಸಿದೆ.
ವನ್ಯಜೀವಿ ಅಭಯಾರಣ್ಯದ ಸಮೀಪ ಯಮುನಾ ನದಿಗೆ ಒಡ್ಡು ನಿರ್ಮಿಸುವ ಮೂಲಕ ನದಿಯ ಹರಿವನ್ನು ಹರ್ಯಾಣದಿಂದ ಉತ್ತರ ಪ್ರದೇಶಕ್ಕೆ ತಿರುಗಿಸಲಾಗಿದೆ ಎಂದು ಆರೋಪಿಸಿದ ಅರ್ಜಿದಾರರ ಪರ ವಕೀಲರು, ಅಕ್ರಮ ಗಣಿಗಾರಿಕೆಗೆ ಅನುಕೂಲವಾಗಲು ಇದನ್ನು ಮಾಡಲಾಗಿದೆ ಎಂದು ಪ್ರತಿಪಾದಿಸಿದರು.
ಅರ್ಜಿಯಲ್ಲಿರುವ ಹೇಳಿಕೆಗಳ ಕುರಿತು ಹರ್ಯಾಣ ಮತ್ತು ಉತ್ತರ ಪ್ರದೇಶ ಸರಕಾರಗಳು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಅರ್ಜಿಯ ಪ್ರತಿಯನ್ನು ಅವುಗಳಿಗೆ ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರಿಗೆ ಸೂಚಿಸಿತು.







