ನ್ಯಾಯಮೂರ್ತಿ ಯಶ್ವಂತ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಅರ್ಜಿ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

ಯಶ್ವಂತ್ ವರ್ಮಾ | PC : PTI
ಹೊಸದಿಲ್ಲಿ: ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಶ್ವಂತ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯವಾದಿ ಮ್ಯಾಥ್ಯೂ ನೆಡುಂಪಾರ ಅವರು ಇದು ಈ ವಿಷಯದ ಕುರಿತ ಮೂರನೇ ಅರ್ಜಿ. ಆದುದರಿಂದ ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನು ಒಳಗೊಂಡ ಪೀಠಕ್ಕೆ ಮನವಿ ಮಾಡಿದರು.
‘‘ನೀವು ಇದನ್ನು ಈಗಲೇ ವಜಾಗೊಳಿಸಲು ಬಯಸುತ್ತೀರಾ ?’’ ಎಂದು ಪೀಠ ಪ್ರಶ್ನಿಸಿತು. ಅಲ್ಲದೆ, ಈ ಅರ್ಜಿಯನ್ನು ಸೂಕ್ತ ಸಮಯದಲ್ಲಿ ಪಟ್ಟಿ ಮಾಡಲಾಗುವುದು ಎಂದು ಹೇಳಿತು.
‘‘ಈ ಅರ್ಜಿಯನ್ನು ವಜಾಗೊಳಿಸಲು ಸಾಧ್ಯವಿಲ್ಲ. ಎಫ್ಐಆರ್ ದಾಖಲಿಸಬೇಕಾಗಿದೆ. ಈಗ ವರ್ಮಾ ಅವರು ಕೂಡ ಇದನ್ನೇ ಕೇಳುತ್ತಿರುವಂತೆ ಕಾಣುತ್ತಿದೆ. ಎಫ್ಐಆರ್ ದಾಖಲಾಗಬೇಕು, ತನಿಖೆ ನಡೆಯಬೇಕು’’ ಎಂದು ಮ್ಯಾಥ್ಯೂ ನೆಡುಂಪಾರಾ ಹೇಳಿದರು.





