"ನಿಮಗೆ ಅವರ ಅವಶ್ಯಕತೆ ಇಲ್ಲ, ನಿಮಗೆ ಬೇಕಾಗಿರುವುದು ನಿಘಂಟು": ಪ್ರೊ. ಅಲಿ ಖಾನ್ ಪ್ರಕರಣದಲ್ಲಿ ಎಸ್ಐಟಿಗೆ ಸುಪ್ರೀಂ ಕೋರ್ಟ್ ತರಾಟೆ

ಅಲಿ ಖಾನ್ ಮಹ್ಮುದಾಬಾದ್ (PTI)
ಹೊಸದಿಲ್ಲಿ: ʼನಿಮಗೆ ಅವರ ಅವಶ್ಯಕತೆ ಇಲ್ಲ, ನಿಮಗೆ ಬೇಕಾಗಿರುವುದು ನಿಘಂಟುʼ ಎಂದು ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮುದಾಬಾದ್ ಅವರ ವಿರುದ್ಧದ ಪ್ರಕರಣದಲ್ಲಿ ಎಸ್ಐಟಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.
ಅಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಮಾಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್ ಗಾಗಿ ಬಂಧನಕ್ಕೀಡಾಗಿದ್ದ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮುದಾಬಾದ್ ಅವರಿಗೆ ಜಾಮೀನು ಮಂಜೂರು ಮಾಡುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಬುಧವಾರ ಸುಪ್ರೀಂ ಕೋರ್ಟ್ ಸಡಿಲಗೊಳಿಸಿದೆ.
ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಎನ್.ಕೋಟೀಶ್ವರ್ ಅವರನ್ನೊಳಗೊಂಡ ನ್ಯಾಯಪೀಠ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಕುರಿತು ಮಹ್ಮುದಾಬಾದ್ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆಯಾದರೂ, ಉಳಿದಂತೆ, ಅವರು ಉಳಿದ ವಿಷಯಗಳ ಕುರಿತು ಲೇಖನಗಳನ್ನು ಬರೆಯಲು ಹಾಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವತಂತ್ರರಾಗಿದ್ದಾರೆ ಎಂದು ಸ್ಪಷ್ಟಪಡಿಸಿತು.
ಪ್ರಾಧ್ಯಾಪಕ ಅಲಿ ಖಾನ್ ಮಹ್ಮುದಾಬಾದ್ ಅವರ ವಿದ್ಯುನ್ಮಾನ ಸಾಧನಗಳನ್ನು ಕಿತ್ತುಕೊಳ್ಳುವ ಮೂಲಕ, ಅತಿರೇಕದ ವರ್ತನೆ ತೋರಿದ ಹರ್ಯಾಣದ ವಿಶೇಷ ತನಿಖಾ ತಂಡವನ್ನೂ ಕೂಡಾ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ತನಿಖೆಯು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು ಎಫ್ಐಆರ್ ಗಳಿಗೆ ಮಾತ್ರ ಸೀಮಿತವಾಗಿರಬೇಕು ಹಾಗೂ ತನಿಖೆಯು ನಾಲ್ಕು ವಾರಗಳೊಳಗೆ ಪೂರ್ಣಗೊಳ್ಳಲೇಬೇಕು ಎಂದು ತಾಕೀತು ಮಾಡಿತು.
ಇದಕ್ಕೂ ಮುನ್ನ, ಮೇ ತಿಂಗಳ ಕೊನೆಯಲ್ಲಿ ಪ್ರಾಧ್ಯಾ ಪಕ ಅಲಿ ಖಾನ್ ಮಹ್ಮುದಾಬಾದ್ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.







