"ನೀವು ಜಾತ್ಯತೀತ ಸೇನೆಗೆ ಅನರ್ಹರು": ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಲು ನಿರಾಕರಿಸಿದ್ದ ಕ್ರಿಶ್ಚಿಯನ್ ಅಧಿಕಾರಿಯ ವಜಾ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ದೇವಸ್ಥಾನವೊಂದರ ಗರ್ಭಗುಡಿಯನ್ನು ಪ್ರವೇಶಿಸಲು ನಿರಾಕರಿಸಿದ್ದ ಕ್ರಿಶ್ಚಿಯನ್ ಸೇನಾಧಿಕಾರಿಯನ್ನು ವಜಾಗೊಳಿಸಿದ್ದನ್ನು ಮಂಗಳವಾರ ಎತ್ತಿ ಹಿಡಿದಿರುವ ಸರ್ವೋಚ್ಚ ನ್ಯಾಯಾಲಯವು, ಒಂದು ಸಂಸ್ಥೆಯಾಗಿ ಸೇನೆಯು ಜಾತ್ಯತೀತವಾಗಿದೆ ಮತ್ತು ಅದರ ಶಿಸ್ತನ್ನು ಉಲ್ಲಂಘಿಸುವಂತಿಲ್ಲ ಎಂದು ಹೇಳಿದೆ.
ಅಶಿಸ್ತಿಗಾಗಿ ಅಧಿಕಾರಿ ಸ್ಯಾಮ್ಯುಯೆಲ್ ಕಮಲೇಶನ್ ಅವರನ್ನು ತೀವ್ರ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು, ನೀವು ನಿಮ್ಮ ಯೋಧರ ಭಾವನೆಗಳಿಗೆ ನೋವನ್ನುಂಟು ಮಾಡಿದ್ದೀರಿ,ನೀವು ಸೇನೆಯಲ್ಲಿರಲು ಸಂಪೂರ್ಣ ಅನರ್ಹರಾಗಿದ್ದೀರಿ ಎಂದು ಹೇಳಿತು.
ಸಿಖ್ ಸ್ಕ್ವಾಡ್ರನ್‌ಗೆ ನಿಯೋಜಿಸಲ್ಪಟ್ಟಿದ್ದ ಕಮಲೇಶನ್ ದೇವಸ್ಥಾನವನ್ನು ಪ್ರವೇಶಿಸುವಂತೆ ಒತ್ತಾಯಿಸುವುದು ತನ್ನ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂಬ ವಾದವನ್ನು ಮುಂದಿಟ್ಟುಕೊಂಡು ತನ್ನ ವಿರುದ್ಧದ ಶಿಸ್ತು ಕ್ರಮವನ್ನು ಪ್ರಶ್ನಿಸಿದ್ದರು. ಆದರೆ,ಸರ್ವೋಚ್ಚ ನ್ಯಾಯಾಲಯವು ಅವರ ನಡವಳಿಕೆಯು ಕಾನೂನುಬದ್ಧ ಆದೇಶದ ಅವಿಧೇಯತೆಗೆ ಸಮನಾಗಿದೆ ಎಂದು ತೀರ್ಪು ನೀಡಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ.ಜಾಯಮಲ್ಯ ಬಾಗ್ಚಿ ಅವರ ಪೀಠವು, ಕಮಲೇಶನ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದನ್ನು ಸಮರ್ಥಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು.
‘ಅವರು ಯಾವ ರೀತಿಯ ಸಂದೇಶವನ್ನು ರವಾನಿಸುತ್ತಿದ್ದಾರೆ? ಸೇನಾಧಿಕಾರಿಯೊಬ್ಬರು ತೀವ್ರ ಅಶಿಸ್ತನ್ನು ಪ್ರದರ್ಶಿಸಿದ್ದಾರೆ, ಕೇವಲ ಇದೊಂದೇ ಕಾರಣಕ್ಕಾಗಿ ಅವರನ್ನು ಹೊರಹಾಕಬೇಕಿತ್ತು’ ಎಂದು ದಿಲ್ಲಿ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸುತ್ತ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಹೇಳಿದರು.
ಕಮಲೇಶನ್ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಅವರು, ‘ಹೆಚ್ಚಿನ ರೆಜಿಮೆಂಟ್‌ಗಳ ಪ್ರಧಾನ ಕಚೇರಿಗಳಲ್ಲಿ ಸರ್ವ ಧರ್ಮ ಸ್ಥಳವಿದೆ, ಆದರೆ ಪಂಜಾಬಿನ ಮಾಮುಮ್‌ನಲ್ಲಿ ದೇವಸ್ಥಾನ ಮತ್ತು ಗುರುದ್ವಾರ ಮಾತ್ರ ಇವೆ. ನನ್ನ ಕಕ್ಷಿದಾರರು ಗರ್ಭಗುಡಿಯನ್ನು ಪ್ರವೇಶಿಸುವುದು ತನ್ನ ನಂಬಿಕೆಗೆ ವಿರುದ್ಧವಾಗಿದೆ ಎಂದು ಹೇಳಿ ದೇವಸ್ಥಾನದೊಳಗೆ ಅಡಿಯಿರಿಸಲು ನಿರಾಕರಿಸಿದ್ದರು. ತಾನು ಹೊರಗಿನಿಂದಲೇ ಹೂವುಗಳನ್ನು ಅರ್ಪಿಸುತ್ತೇನೆ, ಆದರೆ ಒಳಪ್ರವೇಶಿಸುವುದಿಲ್ಲ ಎಂದು ಹೇಳಿದ್ದರು. ಬೇರೆ ಯಾರಿಗೂ ಇದು ಸಮಸ್ಯೆ ಅನ್ನಿಸಿರಲಿಲ್ಲ, ಆದರೆ ಓರ್ವ ಉನ್ನತ ಅಧಿಕಾರಿ ಶಿಸ್ತು ಕ್ರಮವನ್ನು ಆರಂಭಿಸಿದ್ದರು’ ಎಂದು ವಾದಿಸಿದರು.
ಶಿಸ್ತುಬದ್ಧ ಪಡೆಯಲ್ಲಿ ಇಂತಹ ಜಗಳಗಂಟ ವ್ಯಕ್ತಿ ಸ್ವೀಕಾರಾರ್ಹರೇ? ಅವರು ಭಾರತದ ಅತ್ಯಂತ ಶಿಸ್ತುಬದ್ಧ ಪಡೆಯ ಸದಸ್ಯ. ಅವರು ಹೀಗೆ ಮಾಡಬಹುದೇ ಎಂದು ಪ್ರಶ್ನಿಸಿದ ಪೀಠವು, ಇದು ಓರ್ವ ಸೇನಾಧಿಕಾರಿಯಿಂದ ಅತ್ಯಂತ ಘೋರ ಅಶಿಸ್ತನ್ನು ಪ್ರದರ್ಶಿಸುತ್ತದೆ ಎಂದು ಹೇಳಿತು.
ತಾನು ಸರ್ವಧರ್ಮ ಸ್ಥಳವನ್ನು ಪ್ರವೇಶಿಸಲು ನಿರಾಕರಿಸಿರಲಿಲ್ಲ,ಆಚರಣೆಗಳನ್ನು ಮಾಡುವುದನ್ನು ಮಾತ್ರ ನಿರಾಕರಿಸಿದ್ದೆ ಎಂಬ ಕಮಲೇಶನ್ ವಾದವನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು,ಅವರ ಕೃತ್ಯವು ಅವರದೇ ಯೋಧರಿಗೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿತು.
‘ಅಧಿಕಾರಿ ಎಷ್ಟೊಂದು ದುರಹಂಕಾರಿಯೆಂದರೆ ಅವರು ತನ್ನ ಯೋಧರೊಂದಿಗೆ ಹೋಗುವುದಿಲ್ಲ. ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಧಾರ್ಮಿಕ ವಿಧಿಗಳನ್ನು ನೆರವೇರಿಸುವಂತೆ ನಿಮ್ಮನ್ನು ಯಾರಾದರೂ ಕೇಳಿದರೆ ಅದು ಬೇರೆ ವಿಷಯ ಮತ್ತು ನೀವು ಇಲ್ಲ ಎನ್ನಬಹುದು. ಆದರೆ ಒಳ ಪ್ರವೇಶಿಸಲು ನೀವು ಹೇಗೆ ನಿರಾಕರಿಸುತ್ತೀರಿ?’ ಎಂದು ಪ್ರಶ್ನಿಸಿದ ಪೀಠವು, ದೇವಸ್ಥಾನವನ್ನು ಪ್ರವೇಶಿಸಿದರೆ ನಂಬಿಕೆಗೆ ಚ್ಯುತಿಯುಂಟಾಗುವುದಿಲ್ಲ ಎಂದು ಅವರ ಪ್ಯಾಸ್ಟರ್ ಹೇಳಿದ್ದರೂ ಅವರು ಕಡೆಗಣಿಸಿದ್ದರು ಎಂದು ಬೆಟ್ಟು ಮಾಡಿತು.







