ಡಿಜೆ ವಿಚಾರದಲ್ಲಿ ಎರಡು ಕುಟುಂಬಗಳ ನಡುವಿನ ಕಲಹ ಮೂವರ ಹತ್ಯೆಯಲ್ಲಿ ಅಂತ್ಯ
ಜೀಪಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಸಾಂದರ್ಭಿಕ ಚಿತ್ರ
ಭೋಪಾಲ್: ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಕಳೆದ ಶುಕ್ರವಾರ ರಾತ್ರಿ ಎರಡು ಕುಟುಂಬಗಳ ನಡುವೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ವಾಹನವೊಂದನ್ನು ತಡೆದ ಗುಂಪು ಅದರಲ್ಲಿದ್ದ ಮಹಿಳೆ, ಆಕೆಯ ಸೋದರಳಿಯ ಸಹಿತ ಮೂವರನ್ನು ಹತ್ಯೆಗೈದು ಹಲವರಿಗೆ ಗಾಯಗೊಳಿಸಿದ ಘಟನೆ ವರದಿಯಾಗಿದೆ. ಒಬ್ಬ ವ್ಯಕ್ತಿಯನ್ನು ವಾಹನದೊಳಗಡೆಯೇ ಬೆಂಕಿ ಹಚ್ಚಿ ಸಾಯಿಸಲಾಗಿದ್ದು, ತಪ್ಪಿಸಲೆತ್ನಿಸಿದ ಉಳಿದ ಇಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.
ಎರಡು ತಿಂಗಳ ಹಿಂದೆ ಗಣೇಶ ವಿಸರ್ಜನೆ ಕಾರ್ಯಕ್ರಮದ ವೇಳೆ ಡಿಜೆ ಸಂಗೀತ ಇಡುವ ವಿಚಾರದಲ್ಲಿ ಚಕ್ರಂಪುರ್ ಗ್ರಾಮದಲ್ಲಿ ಭಡೌರಿಯಾ ಮತ್ತು ಕುಶ್ವಾ ಕುಟುಂಬಗಳ ನಡುವೆ ಸಂಘರ್ಷದ ಮುಂದುವರಿದ ಭಾಗವಾಗಿ ಶುಕ್ರವಾರದ ಘಟನೆ ನಡೆದಿದೆ. ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದಾರೆ ಹಾಗೂ ಆರೋಪಿಗಳ ಪೈಕಿ ಐದು ಮಂದಿಯ ಮನೆಗಳನ್ನು ಗುರುತಿಸಿದ ಆಡಳಿತ ಅವುಗಳನ್ನು ನೆಲಸಮಗೊಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಇತ್ತಂಡಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಮುನ್ನಾ ಭಡೌರಿಯಾ ಕುಟುಂಬ ಜೀಪ್ ಒಂದರಲ್ಲಿ ಪ್ರಯಾಣಿಸುತ್ತಿದ್ದಾಗ ಕುಶ್ವಾಹ ಕುಟುಂಬದ ನಿವಾಸದ ಪಕ್ಕ ಹಾದು ಹೋಗುವಾಗ ಅದನ್ನು ಒಂದು ಗುಂಪು ಕಲ್ಲೆಸೆಯುವ ಮೂಲಕ ತಡೆದು ಅದನ್ನು ಸುತ್ತುವರಿದು ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು.
ಮೃತರನ್ನು ಆಶಾದೇವಿ (42) ಆಕೆಯ ಸೋದರಳಿಯ ಅಮರ್ ಸಿಂಗ್ ಆಲಿಯಾಸ್ ಹಿಮಾಂಶು (20) ಮತ್ತು ಮೈದುನ ಲಕ್ಷ್ಮಣ್ (45) ಎಂದು ಗುರುತಿಸಲಾಗಿದೆ. ಎಲ್ಲರೂ ಛತ್ತರಪುರ್ ನಿವಾಸಿಗಳಾಗಿದ್ದಾರೆ.
ಭಾಯಿ ದೂಜ್ ಆಚರಣೆಗಾಗಿ ಆಶಾದೇವಿ ನಿವಾಸಕ್ಕೆ ಹಿಮಾಂಶು ಆಗಮಿಸಿದ್ದು ಆತ ವಾಹನದೊಳಗಡೆ ಜೀವಂತ ದಹಿಸಲ್ಪಟ್ಟಿದ್ದಾನೆ.,
ಆಶಾಳ ಪತಿ ಮುನ್ನಾ (50), ಪುತ್ರರಾದ ರಾಜೇಂದ್ರ (28), ಭೋಲಾ ಆಲಿಯಾಸ್ ಯೋಗೇಂದ್ರ ಸಿಂಗ್ (27) ಮತ್ತು ಸೋದರಳಿಯ ಸೌರಭ್ ಸೆಂಗರ್ (25) ಗಂಭೀರ ಗಾಯಗೊಂಡಿದ್ದರೆ ಕುಶ್ವಾಹ ಗುಂಪಿಗೆ ಸೇರಿದ ದಿನೇಶ್ ಎಂಬಾತನಿಗೂ ಗುಂಡೇಟಿನ ಗಾಯಗಳಾಗಿವೆ.
ಘಟನೆಯ ಬೆನ್ನಲ್ಲೇ ಮೃತರ ಸಂಬಂಧಿತಕರ ನರ್ವಾರ್ ಪೊಲೀಸ್ ಠಾಣೆಯೆದುರು ಪ್ರತಿಭಟನೆ ನಡೆಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವ ಹಾಗೂ ಆರೋಪಿಗಳ ಮನೆಗಳನ್ನು ನೆಲಸಮಗೊಳಿಸುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದುಕೊಳ್ಳಲಾಗಿತ್ತು.
ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.