ಉಗ್ರರೊಂದಿಗೆ ನಂಟಿನ ಆರೋಪ ; ಯುವಕ ಕಸ್ಟಡಿ ಚಿತ್ರಹಿಂಸೆಯಿಂದ ಮೃತ್ಯು: ಮಾಜಿ ಸಿಎಂ ಮೆಹಬೂಬಾ ಮುಫ್ತಿ

ಮೆಹಬೂಬಾ ಮುಫ್ತಿ | PTI
ಶ್ರೀನಗರ : ಉಗ್ರರ ಪರವಾಗಿ ಬಹಿರಂಗವಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಆರೋಪಕ್ಕೊಳಗಾದ 25 ವರ್ಷದ ಯುವಕ ಪೊಲೀಸ್ ಕಸ್ಟಡಿಯಲ್ಲಿ ಕ್ರೂರ ಚಿತ್ರಹಿಂಸೆಗೆ ಒಳಗಾದ ಬಳಿಕ ಗಡಿ ಜಿಲ್ಲೆಯಾದ ಕಥುವಾದಲ್ಲಿ ಮೃತಪಟ್ಟಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಗುರುವಾರ ಆರೋಪಿಸಿದ್ದಾರೆ.
‘‘ಕಥುವಾದಿಂದ ಆಘಾತಕಾರಿ ಸುದ್ದಿ. ಬಿಲ್ಲಾವರ್ನ ಪೆರೋಡಿ ಗ್ರಾಮದ 25 ವರ್ಷದ ಯುವಕ ಮಖಾನ್ ದಿನ್ನನ್ನು ಉಗ್ರರ ಪರವಾಗಿ ಬಹಿರಂಗವಾಗಿ ಕೆಲಸ ಮಾಡುವ ವ್ಯಕ್ತಿ ಎಂದು ತಪ್ಪಾಗಿ ಆರೋಪಿಸಿ ಬಿಲ್ಲಾವರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ವಶಕ್ಕೆ ತೆಗೆದುಕೊಂಡಿದ್ದರು. ಆತನಿಗೆ ಕ್ರೂರವಾಗಿ ಥಳಿಸಿದ್ದರು, ಚಿತ್ರಹಿಂಸೆ ನೀಡಿದ್ದರು, ತಪ್ಪೊಪ್ಪಿಕೊಳ್ಳುವಂತೆ ಬಲವಂತಪಡಿಸಿದ್ದರು. ಅನಂತರ ಆತ ಇಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ’’ ಎಂದು ಮಹೆಬೂಬಾ ಮುಫ್ತಿ ಅವರು ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.
ಈ ಘಟನೆ ವ್ಯಾಪಕ ಆತಂಕ ಉಂಟು ಮಾಡಿರುವುದರಿಂದ ಈ ಪ್ರದೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಹಾಗೂ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ವ್ಯಕ್ತಿಗಳ ಬಂಧನದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ. ಈ ಘಟನೆ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಅಮಾಯಕ ಯುವಕರನ್ನು ಗುರಿಯಾಗಿಸುವ ಆತಂಕಕಾರಿ ಪ್ರವೃತ್ತಿಯನ್ನು ಸೂಚಿಸುತ್ತದೆ. ಈ ಕುರಿತು ಕೂಡಲೇ ತನಿಖೆ ಆರಂಭಿಸುವಂತೆ ನಾನು ಜಮ್ಮು ಪೊಲೀಸ್ ನ ಡಿಜಿಪಿ ಅವರನ್ನು ಆಗ್ರಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಕುರಿತಂತೆ ಜಮ್ಮು ಹಾಗೂ ಕಾಶ್ಮೀರ ಬಕೆರ್ವಾಲ್ ಯೂತ್ ವೆಲ್ಫೇರ್ ಕಾನ್ಫರೆನ್ಸ್ (ಜೆಕೆಜಿಬಿವೈಡಬ್ಲ್ಯುಸಿ)ನ ರಾಜ್ಯಾಧ್ಯಕ್ಷ ಝಾಹಿದ್ ಪರ್ವಾಝ್ ಚೌಧರಿ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.
ಬಿಲ್ಲವಾರದ ಪೇರೋಡಿಯ 25 ವರ್ಷದ ಮಖಾನ್ ದಿನ್ನನ್ನು ಉಗ್ರರ ಪರ ಬಹಿರಂಗವಾಗಿ ಕೆಲಸ ಮಾಡುವ ವ್ಯಕ್ತಿ ಎಂಬ ಸುಳ್ಳು ಹಾಗೂ ತಿರುಚಿದ ಆರೋಪದಲ್ಲಿ ಕಥುವಾ ಜಿಲ್ಲೆಯ ಬಿಲ್ಲಾವರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಬಂಧಿಸಿದ್ದರು ಎಂದು ಅವರು ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.
‘‘ಆತನಿಗೆ ಪೊಲೀಸರು ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದರು. ತಪ್ಪೊಪ್ಪಿಕೊಳ್ಳುವಂತೆ ಬಲವಂತಪಡಿಸಿದ್ದರು. ಇಂದು ಆತನ ಮೃತದೇಹ ಪತ್ತೆಯಾಗಿದೆ. ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು’’ ಎಂದು ಅವರು ಆಗ್ರಹಿಸಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28







