ಕೇರಳ ಪ್ರವಾಸೋದ್ಯಮ ಇಲಾಖೆಗೆ ಜಾಹೀರಾತು ವಿಡಿಯೊಗಳನ್ನು ನಿರ್ಮಿಸಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ!
ಪಾಕಿಸ್ತಾನದ ಪರವಾಗಿ ಗೂಢಚಾರಿಕೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಯೂಟ್ಯೂಬರ್

Photo Credit: Instagram/@travelwithjo1
ತಿರುವನಂತಪುರಂ: ಪಾಕಿಸ್ತಾನದ ಪರವಾಗಿ ಗೂಢಚಾರಿಕೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ, ಅದಕ್ಕೂ ಮುನ್ನ ಕೇರಳಕ್ಕೆ ಭೇಟಿ ನೀಡಿ, ಕೇರಳ ಪ್ರವಾಸೋದ್ಯಮ ಇಲಾಖೆಯ ಮನವಿ ಮೇರೆಗೆ ಜಾಹೀರಾತು ನಿರ್ಮಿಸಿದ್ದ ಸಂಗತಿ ಬೆಳಕಿಗೆ ಬಂದಿದೆ.
ಕೇರಳ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಕಳೆದ ಎರಡು ವರ್ಷಗಳಿಂದ ಕೇರಳ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇರಳ ಪ್ರವಾಸೋದ್ಯಮ ಸಚಿವರು ತೊಡಗಿಸಿದ್ದ ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಗಳ ಪೈಕಿ ಜ್ಯೋತಿ ಮಲ್ಹೋತ್ರಾ ಕೂಡಾ ಒಬ್ಬರಾಗಿದ್ದರು. ಆಕೆಯ ಕೇರಳ ಪ್ರವಾಸವನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಪ್ರಾಯೋಜಿಸಿತ್ತು ಎಂದು ಹೇಳಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕೇರಳ ಪ್ರವಾಸೋದ್ಯಮ ಇಲಾಖೆ ಸಚಿವ ಮುಹಮ್ಮದ್ ರಿಯಾಝ್, ಜ್ಯೋತಿ ಮಲ್ಹೋತ್ರಾ ವಿರುದ್ಧ ಗೂಢಚಾರಿಕೆಯ ಆರೋಪ ಕೇಳಿ ಬರುವುದಕ್ಕೂ ಮುನ್ನ, ಆಕೆಯನ್ನು ಕೇರಳಕ್ಕೆ ಆಹ್ವಾನಿಸಲಾಗಿತ್ತು. ಗೂಢಚಾರಿಕೆ ಚಟುವಟಿಕೆಗಳಂತಹ ಯಾವುದೇ ಬಗೆಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕುರಿತು ತಿಳಿದಿದ್ದರೆ ಕೇರಳ ಸರಕಾರ ಆಹ್ವಾನಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಗೂಢಚಾರಿಕೆಯ ಆರೋಪದ ಮೇಲೆ ಜ್ಯೋತಿ ಮಲ್ಹೋತ್ರಾ ಬಂಧನಕ್ಕೀಡಾದ ನಂತರ, ಆಕೆ ಕೇರಳಕ್ಕೆ ಭೇಟಿ ನೀಡಿದ್ದ ಬಗೆಗೂ ಕೂಡಾ ಗುಪ್ತಚರ ಸಂಸ್ಥೆಗಳ ಪರಿಶೀಲನೆ ನಡೆಸುತ್ತಿವೆ.