ಯೂಸುಫ್ ಪಠಾಣ್ ಓರ್ವ ಭೂ ಅತಿಕ್ರಮಣಕಾರ: ಗುಜರಾತ್ ಹೈಕೋರ್ಟ್

ಯೂಸುಫ್ ಪಠಾಣ್ | PC : X/ @iamyusufpathan
ಅಹಮದಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ವಡೋದರದಲ್ಲಿನ ವಸತಿ ನಿವೇಶನದ ಅತಿಕ್ರಮಣಕಾರರಾಗಿದ್ದಾರೆ ಎಂದು ಇತ್ತೀಚೆಗೆ ಗುಜರಾತ್ ಹೈಕೋರ್ಟ್ ತೀರ್ಪು ನೀಡಿದ್ದು, ಈ ಅತಿಕ್ರಮಣವನ್ನು ತೆರವುಗೊಳಿಸುವಂತೆ ಸ್ಥಳೀಯ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ.
ಕಾನೂನು ಉಲ್ಲಂಘಿಸಿದ ಸೆಲೆಬ್ರಿಟಿಗಳ ಕುರಿತು ಮೃದು ಧೋರಣೆ ತಳೆಯುವುದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಿದಂತಾಗಲಿದೆ ಎಂದು ಈ ವೇಳೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಯೂಸುಫ್ ಪಠಾಣ್ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ತಿಂಗಳು ನ್ಯಾ.ಮೌನ ಭಟ್ ಅವರನ್ನೊಳಗೊಂಡ ಏಕಸದಸ್ಯ ಪೀಠ ವಜಾಗೊಳಿಸಿದೆ. 2012ರಿಂದ ಆಕ್ರಮಿಸಿಕೊಂಡಿರುವ ಸರಕಾರಿ ಒಡೆತನದ ಜಾಗವನ್ನು ತೆರವುಗೊಳಿಸುವಂತೆ ಕಳೆದ ವರ್ಷ ವಡೋದರ ಮಹಾನಗರ ಪಾಲಿಕೆ ತಮಗೆ ನೀಡಿದ್ದ ನೋಟಿಸ್ ಅನ್ನು ಪ್ರಶ್ನಿಸಿ, ಕ್ರಿಕೆಟಿಗ ಯೂಸುಫ್ ಪಠಾಣ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿವಾದಿತ ಜಾಗವು ವಡೋದರದ ತಂದಲ್ಜಾ ಪ್ರದೇಶದಲ್ಲಿರುವ ಯೂಸುಫ್ ಪಠಾಣ್ ರ ಬಂಗಲೆಗೆ ಹೊಂದಿಕೊಂಡಂತಿರುವ ಮುಕ್ತ ವಸತಿ ಜಾಗವಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟಿಗನಾದ ನನಗೆ ಹಾಗೂ ನನ್ನ ಕುಟುಂಬಕ್ಕೆ ಭದ್ರತಾ ಬೆದರಿಕೆ ಇದೆ ಎಂಬ ಕಾರಣವನ್ನು ನೀಡಿ ಈ ಜಾಗವನ್ನು ಖರೀದಿಸಲು ಯೂಸುಫ್ ಪಠಾಣ್ ವಡೋದರ ಮಹಾನಗರ ಪಾಲಿಕೆಯನ್ನು ಸಂಪರ್ಕಿಸಿದ್ದರು. ಈ ಜಾಗದ ಮೌಲ್ಯಮಾಪನ ನಡೆಸಿದ್ದ ವಡೋದರ ಮಹಾನಗರ ಪಾಲಿಕೆ, ಈ ಸಂಬಂಧ ಪ್ರಸ್ತಾವನೆಯೊಂದನ್ನು ರಾಜ್ಯ ಸರಕಾರಕ್ಕೆ ರವಾನಿಸಿತ್ತು. ಆದರೆ, ಈ ಪ್ರಸ್ತಾವನೆ 2014ರಲ್ಲಿ ವಜಾಗೊಂಡಿತ್ತು. ಈ ಪ್ರಸ್ತಾವನೆ ವಜಾಗೊಂಡ ಹೊರತಾಗಿಯೂ ಆ ಜಾಗದ ಒತ್ತುವರಿಯನ್ನು ಯೂಸುಫ್ ಪಠಾಣ್ ಮುಂದುವರಿಸಿದ್ದರು.
ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಹರಂಪುರ್ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಯೂಸುಫ್ ಪಠಾಣ್ ಆಯ್ಕೆಗೊಂಡ ನಂತರ, ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿತ್ತು. ಸದರಿ ಜಾಗವನ್ನು ತೆರವುಗೊಳಿಸುವಂತೆ ವಡೋದರ ಮಹಾನಗರ ಪಾಲಿಕೆ ಯೂಸುಫ್ ಪಠಾಣ್ ಗೆ ನೋಟಿಸ್ ಜಾರಿಗೊಳಿಸಿತ್ತು. ಹೀಗಾಗಿ, ಪರಿಹಾರ ಕೋರಿ ಯೂಸುಫ್ ಪಠಾಣ್ ಹೈಕೋರ್ಟ್ ಮೊರೆ ಹೋಗಿದ್ದರು.
ನಾನು ಹಾಗೂ ನನ್ನ ಸಹೋದರ ಇರ್ಫಾನ್ ಪಠಾಣ್ ಇಬ್ಬರೂ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರಾಗಿರುವುದರಿಂದ, ನಾನು ಆ ಜಾಗ ಖರೀದಿಸಲು ಅನುಮತಿ ನೀಡಬೇಕು ಎಂದು ಅವರು ಗುಜರಾತ್ ಮುಖ್ಯಮಂತ್ರಿಗೂ ಮನವಿ ಮಾಡಿದ್ದರು.
2014ರಲ್ಲಿ ರಾಜ್ಯ ಸರಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ ನಂತರ, ಆ ಜಾಗದ ಮೇಲೆ ಯೂಸುಫ್ ಪಠಾಣ್ ಗೆ ಯಾವುದೇ ಹಕ್ಕಿಲ್ಲ ಎಂದು ನ್ಯಾ. ಮೌನ ಭಟ್ ಸ್ಪಷ್ಟಪಡಿಸಿದ್ದಾರೆ.
“ಸುದೀರ್ಘ ಕಾಲದಿಂದ ಸ್ವಾಧೀನದಲ್ಲಿರಿಸಿಕೊಂಡಿರುವುದು ಅಥವಾ ಈ ಹಂತದಲ್ಲಿ ಆ ಜಾಗದ ಖರೀದಿಗೆ ಹಣ ಪಾವತಿಸಲು ಸಿದ್ಧವಿರುವುದು ವಿವಾದಕ್ಕೊಳಗಾಗಿರುವ ಜಾಗದ ಮೇಲೆ ಹಕ್ಕನ್ನು ಮಂಜೂರು ಮಾಡುವುದಿಲ್ಲ. ಈ ಅಕ್ರಮವನ್ನು ಶಾಶ್ವತಗೊಳಿಸಲು ಅನುಮತಿ ನೀಡಲು ಸಾಧ್ಯೊವಿಲ್ಲ” ಎಂದು ನ್ಯಾ. ಮೌನ ಭಟ್ ಅಭಿಪ್ರಾಯ ಪಟ್ಟಿದ್ದಾರೆ.
ಯೂಸುಫ್ ಪಠಾಣ್ ಓರ್ವ ರಾಷ್ಟ್ರೀಯ ಪ್ರತಿನಿಧಿ ಹಾಗೂ ಸಾರ್ವಜನಿಕ ವ್ಯಕ್ತಿಯಾಗಿದ್ದು, ಅವರಿಗೆ ಕಾನೂನಿಗೆ ಬದ್ಧವಾಗಿರಬೇಕಾದ ಬಹು ದೊಡ್ಡ ಹೊಣೆಗಾರಿಕೆಯಿದೆ ಎಂಬ ವಡೋದರ ಮಹಾನಗರ ಪಾಲಿಕೆಯ ವಾದವನ್ನು ನ್ಯಾಯಾಲಯ ಮನ್ನಿಸಿತು.
ಸೌಜನ್ಯ: deccanherald.com







