ರಾತ್ರಿ ಮಲಗುವಾಗ ಇಯರ್ ಫೋನ್ ಬಳಸ್ತೀರಾ? ಒಂದ್ನಿಮಿಷ ಇಲ್ಲಿ ಕೇಳಿ...

Photo Credit : chatgpt
ಅನೇಕ ಮಂದಿಗೆ ಇಯರ್ಪ್ಲಗ್ಗಳು ಪಕ್ಕದಲ್ಲಿ ಮಲಗಿರುವವರ ಗೊರಕೆ, ಸಂಚಾರದ ಶಬ್ದ ಅಥವಾ ನಿದ್ರೆಯ ಮೇಲೆ ಪರಿಣಾಮ ಬೀರುವ ಇತರ ಅಡಚಣೆಗಳನ್ನು ತಡೆಯುವ ಸರಳ ಮಾರ್ಗವಾಗಿರುತ್ತವೆ. ಅದೇ ರೀತಿ ಇಯರ್ಫೋನ್ಗಳು ಸಂಗೀತ ಕೇಳುವುದು ಅಥವಾ ವೃತ್ತಿಪರ ಕೆಲಸಕ್ಕೆ ಅತ್ಯಗತ್ಯ ಸಾಧನವಾಗಿರುತ್ತವೆ. ಆದರೆ ಪ್ರತಿ ರಾತ್ರಿ ಮಲಗುವಾಗ ಇಯರ್ಪ್ಲಗ್ ಬಳಸುವುದು ಅಥವಾ ದೀರ್ಘಕಾಲ ಇಯರ್ಫೋನ್ ಬಳಸುವುದು ಆರೋಗ್ಯಕರವೇ?
ಇವುಗಳನ್ನು ನಿತ್ಯವೂ ಬಳಸುವ ನಾವು ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಹೆಚ್ಚಾಗಿ ಆಲೋಚಿಸುವುದಿಲ್ಲ. ತಾತ್ಕಾಲಿಕ ನೆಮ್ಮದಿ ಅಥವಾ ಅಗತ್ಯಕ್ಕಾಗಿ ಬಳಸುತ್ತೇವೆ. ಈ ಬಗ್ಗೆ ‘ವಾರ್ತಾ ಭಾರತಿ’ಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ENT ತಜ್ಞರು ಹಾಗೂ ಅಸಿಸ್ಟಂಟ್ ಪ್ರೊಫೆಸರ್ ಡಾ. ಚೈತನ್ಯ ವದ್ವ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಯರ್ಪ್ಲಗ್/ ಇಯರ್ಫೋನ್ ನಿತ್ಯ ಬಳಕೆ ಉತ್ತಮವೇ?
ಇಯರ್ಪ್ಲಗ್, ಇಯರ್ಪಾಡ್ಸ್ ಮತ್ತು ಇಯರ್ಫೋನ್ಗಳು ವಿಭಿನ್ನ ಉದ್ದೇಶಗಳಿಗೆ ಬಳಸಲಾಗುತ್ತವೆ. ಇಯರ್ಪ್ಲಗ್ ಅನ್ನು ಹೊರಗಡೆಯಿಂದ ಬರುವ ಶಬ್ದಗಳನ್ನು ತಡೆಯಲು ಬಳಸಲಾಗುತ್ತದೆ. ಇಯರ್ಫೋನ್ಗಳನ್ನು ಸಂಗೀತ, ಪಾಡ್ಕಾಸ್ಟ್ ಅಥವಾ ಇತರ ಧ್ವನಿಗಳನ್ನು ಕೇಳಲು ಬಳಸಲಾಗುತ್ತದೆ. ಇಯರ್ಪ್ಲಗ್ ಮತ್ತು ಇಯರ್ಫೋನ್ ಎರಡರಲ್ಲೂ ಒಂದೇ ರೀತಿಯ ಅಡ್ಡಪರಿಣಾಮಗಳು ಇರುತ್ತವೆ. ಹೀಗಾಗಿ ಅವುಗಳನ್ನು ದೀರ್ಘಕಾಲ ಬಳಸುವುದು ಸೂಕ್ತವಲ್ಲ.
ರಾತ್ರಿ ಮಲಗುವಾಗ ಇಯರ್ಪ್ಲಗ್ ಬಳಸಬಹುದೇ?
ಇಯರ್ಪ್ಲಗ್ ಆಗಲಿ, ಇಯರ್ಫೋನ್ಗಳಾಗಲಿ ರಾತ್ರಿ ಮಲಗುವಾಗ ಬಳಸಬಾರದು. ನಿರಂತರವಾಗಿ ದೀರ್ಘಕಾಲ ಬಳಸಿಕೊಂಡು ಮಲಗುವುದರಿಂದ ಹಲವು ಅನನುಕೂಲತೆಗಳಿವೆ.
ಮೊದಲನೆಯದಾಗಿ, ಈಗಾಗಲೇ ಕಿವಿಯ ಕಾಲುವೆಯಲ್ಲಿ (ಇಯರ್ ಕೆನಾಲ್) ಮೇಣ (ವ್ಯಾಕ್ಸ್) ಇದ್ದರೆ, ಇಯರ್ಪ್ಲಗ್ ಅಥವಾ ಇಯರ್ಫೋನ್ ಅದನ್ನು ಕಿವಿಯ ಒಳಭಾಗದ ಇಯರ್ ಡ್ರಮ್ ಕಡೆಗೆ ಇನ್ನಷ್ಟು ತಳ್ಳುತ್ತದೆ. ಇದರಿಂದ ಫಂಗಲ್ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ.
ಎರಡನೆಯದಾಗಿ, ತೇವಾಂಶವನ್ನು (ಮೊಯಿಶ್ಚರ್) ಸಿಲುಕಿಸುತ್ತದೆ. ಹೀಗಾಗಿ ತೇವಾಂಶ ಹೆಚ್ಚಾಗಿ ಫಂಗಲ್ ಇನ್ಫೆಕ್ಷನ್ ಆಗುವ ಸಾಧ್ಯತೆ ಜಾಸ್ತಿಯಾಗುತ್ತದೆ. ಇಯರ್ಪ್ಲಗ್ ಇಯರ್ ಕೆನಾಲ್ನಲ್ಲಿ ಬಿಗಿಯಾಗಿ ಕುಳಿತುಕೊಳ್ಳುವುದರಿಂದ ಗಾಳಿಯಾಡುವುದಿಲ್ಲ. ಹೀಗಾಗಿ ತೇವಾಂಶ ಕಿವಿಯೊಳಗೆ ಸಿಲುಕಿಕೊಂಡು ಸೋಂಕುಗಳು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಇಯರ್ಪ್ಲಗ್ ತುಂಬಾ ಬಿಗಿಯಾಗಿ ಹಾಕಿದರೆ ಸುತ್ತಮುತ್ತಲಿನ ಚರ್ಮದ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ನೋವು ಅಥವಾ ಚರ್ಮಕ್ಕೆ ಕಿರಿಕಿರಿ ಉಂಟಾಗಬಹುದು. ಅದರ ಪರಿಣಾಮವಾಗಿ ಇಯರ್ ಕೆನಾಲ್ನ ಚರ್ಮದಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಈ ಅಡ್ಡಪರಿಣಾಮಗಳು ಇಯರ್ಪ್ಲಗ್ ಮತ್ತು ಇಯರ್ಫೋನ್ ಎರಡಕ್ಕೂ ಅನ್ವಯಿಸುತ್ತವೆ.
ಇಯರ್ಫೋನ್ಗಳಿಂದ ಅಧಿಕ ತೀವ್ರತೆಯ ಶಬ್ದದ ಸಮಸ್ಯೆ
ಇಯರ್ಫೋನ್ಗಳ ವಿಷಯದಲ್ಲಿ ಮೇಲಿನ ಸಮಸ್ಯೆಗಳ ಜೊತೆಗೆ ಮತ್ತೊಂದು ಅನನುಕೂಲತೆಯೂ ಇದೆ. ಇಯರ್ಫೋನ್ಗಳು ಶಬ್ದವನ್ನು ಬಹಳ ಸಮೀಪದಿಂದ ಕೇಳಲು ಸಹಾಯ ಮಾಡುವುದರಿಂದ, ಶಬ್ದ ನೇರವಾಗಿ ಇಯರ್ ಡ್ರಮ್ಗೆ ತಲುಪುತ್ತದೆ. ಹೀಗಾಗಿ ಅಧಿಕ ತೀವ್ರತೆಯ (ಹೈ ಇಂಟೆನ್ಸಿಟಿ) ಶಬ್ದ ನಿರಂತರವಾಗಿ ಇಯರ್ ಡ್ರಮ್ಗೆ ತಲುಪುತ್ತದೆ.
ಇದರಿಂದ ಇಯರ್ ಕೆನಾಲ್ ಒಳಗೆ, ಇಯರ್ ಡ್ರಮ್ನ ಹಿಂಭಾಗದಲ್ಲಿರುವ ಕೆಲವು ಸ್ನಾಯುಗಳು ಮತ್ತು ಮೂಳೆಗಳಿಗೆ ಸಮಸ್ಯೆಯಾಗಬಹುದು. ಜೊತೆಗೆ ಇಯರ್ ಡ್ರಮ್ ನಿರಂತರವಾಗಿ ಅಧಿಕ ತೀವ್ರತೆಯ ಶಬ್ದವನ್ನು ಸ್ವೀಕರಿಸುವುದರಿಂದ ಫೆಟಿಗೇಬಿಲಿಟಿ (Fatigability) ಅಥವಾ ಥ್ರೆಶೋಲ್ಡ್ ಸ್ಥಿತಿ ಉಂಟಾಗುತ್ತದೆ. ಈ ಹಂತದಲ್ಲಿ ನೋವು ಕಾಣಿಸಬಹುದು. ದೀರ್ಘಕಾಲ ಹೀಗೆಯೇ ಬಳಸಿದರೆ ಶ್ರವಣ ನಷ್ಟ (ಹಿಯರಿಂಗ್ ಲಾಸ್) ಉಂಟಾಗುವ ಸಾಧ್ಯತೆ ಇರುತ್ತದೆ.
ಗೊರಕೆ, ಟ್ರಾಫಿಕ್ ಶಬ್ದಗಳಿಂದ ತಪ್ಪಿಸಿಕೊಳ್ಳಲು ಇಯರ್ಪ್ಲಗ್ ಬಳಸಬಹುದೇ?
ಬಳಸಬಹುದು. ಆದರೆ ಗೊರಕೆಯಿಂದ ತಪ್ಪಿಸಿಕೊಳ್ಳಲು ಪ್ರತಿದಿನ ಬಳಸಿದರೆ ಇಯರ್ ಕೆನಾಲ್ಗೆ ಸಮಸ್ಯೆಯಾಗಬಹುದು. ಮೇಲಿನ ಎಲ್ಲ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಟ್ರಾಫಿಕ್ ಅಥವಾ ಹೊರಗಿನ ಶಬ್ದ ತಪ್ಪಿಸಲು ತಾತ್ಕಾಲಿಕವಾಗಿ ಬಳಸಿದರೂ ಅದರದೇ ಆದ ಅನನುಕೂಲತೆಗಳಿರುವುದರಿಂದ ಶಿಫಾರಸು ಮಾಡುವುದಿಲ್ಲ.
ನಿರಂತರವಾಗಿ ಸ್ನಗ್ಲಿ ಫಿಟ್ ಆಗುವಂತೆ ಇಯರ್ಪ್ಲಗ್ ಹಾಕಿಕೊಂಡರೆ ಹೊರಗಿನ ಯಾವುದೇ ಶಬ್ದ ಕೇಳುವುದಿಲ್ಲ. ಪಕ್ಕದಲ್ಲಿ ಮಗು ಅಳುತ್ತಿದ್ದರೂ ಅಥವಾ ಅಲಾರಂ ಹೊಡೆದರೂ ಕೇಳಿಸುವುದಿಲ್ಲ. ಈ ಕಾರಣದಿಂದಲೂ ಇದನ್ನು ಶಿಫಾರಸು ಮಾಡುವುದಿಲ್ಲ.
ಇಯರ್ಪ್ಲಗ್ ಬಳಸಿದಾಗ ಸುತ್ತಮುತ್ತಲಿನ ಧ್ವನಿಗಳು ಕೇಳಿಸದೇ ಇರುವುದು ಅಪಾಯಕಾರಿ. ಹೀಗಾಗಿ ರಾತ್ರಿ ವೇಳೆ ನಿರಂತರವಾಗಿ ಇಯರ್ಪ್ಲಗ್ ಬಳಸುವುದನ್ನು ಸಾಮಾನ್ಯವಾಗಿ ಶಿಫಾರಸು ಮಾಡುವುದಿಲ್ಲ.
ದೀರ್ಘ ಸಮಯ ಇಯರ್ಫೋನ್/ ಹೆಡ್ಫೋನ್ ಬಳಸಬಹುದೇ?
ಇಯರ್ಫೋನ್ಗಳಲ್ಲಿ ವೈರ್ಡ್ ಇಯರ್ಫೋನ್, ವೈರ್ಲೆಸ್ ಬ್ಲೂಟೂತ್ ಇಯರ್ಪಾಡ್ಸ್ ಹಾಗೂ ವಿವಿಧ ರೀತಿಯ ಹೆಡ್ಫೋನ್ಗಳಿವೆ. ಹೆಡ್ಫೋನ್ಗಳಲ್ಲಿ ಓವರ್ ದಿ ಇಯರ್, ಬ್ಯಾಕ್ ದಿ ಇಯರ್ ಹಾಗೂ ಬೋನ್ ಕಂಡಕ್ಷನ್ ಮಾದರಿಗಳಿವೆ. ಇಯರ್ಫೋನ್ ಮತ್ತು ಇಯರ್ಪಾಡ್ಗಳಿಗೆ ಹೋಲಿಸಿದರೆ ಹೆಡ್ಫೋನ್ಗಳು ಉತ್ತಮ.
ಕಚೇರಿಯಲ್ಲಿ ದೀರ್ಘಕಾಲ ಆಫೀಸ್ ಕರೆಗಳು, ಸಭೆಗಳು, ಉಪನ್ಯಾಸ ಅಥವಾ ಗಾಯನಕ್ಕಾಗಿ ಬಳಸುವವರಿಗೂ ಇಯರ್ಫೋನ್ ಅಥವಾ ಇಯರ್ಪಾಡ್ಗಳಿಗಿಂತ ಹೆಡ್ಫೋನ್ ಉತ್ತಮ ಆಯ್ಕೆಯಾಗಿದೆ.
ಹೆಡ್ಫೋನ್ನ ಸೌಂಡ್ ರಿಸೀವರ್ ಇಯರ್ ಕೆನಾಲ್ ಒಳಗೆ ಹೋಗುವುದಿಲ್ಲ. ಅದು ಕಿವಿಯ ಹೊರಭಾಗವಾದ ಪಿನ್ನಾ ಮೇಲೆ ಇರುತ್ತದೆ. ಹೀಗಾಗಿ ಕೆನಾಲ್ ಒಳಗೆ ಯಾವುದೇ ಒತ್ತಡ ಇರುವುದಿಲ್ಲ.
ಓವರ್ ದಿ ಇಯರ್, ಬ್ಯಾಕ್ ದಿ ಇಯರ್ ಹಾಗೂ ಬೋನ್ ಕಂಡಕ್ಷನ್ ಈ ಮೂರು ಮಾದರಿಗಳಲ್ಲಿ ಯಾವುದೂ ಕಿವಿಯೊಳಗೆ ಹೋಗುವುದಿಲ್ಲ. ಈ ಮೂರರಲ್ಲಿ ಬೋನ್ ಕಂಡಕ್ಷನ್ ಅತ್ಯುತ್ತಮ. ಅದು ಲಭ್ಯವಿಲ್ಲದಿದ್ದರೆ ಓವರ್ ದಿ ಇಯರ್ ಅಥವಾ ಬ್ಯಾಕ್ ದಿ ಇಯರ್ ಹೆಡ್ಫೋನ್ ಬಳಸಬಹುದು.
ವೈರ್ಡ್ ಇಯರ್ಫೋನ್ ಉತ್ತಮವೇ?
ಇಯರ್ಫೋನ್ಗಳಲ್ಲಿ ವೈರ್ಡ್ ಮತ್ತು ವೈರ್ಲೆಸ್ಗಳಲ್ಲಿ ಯಾವುದು ಉತ್ತಮ ಎಂದು ಕೇಳಿದರೆ, ನಾನು ವೈರ್ಡ್ ಅನ್ನು ಶಿಫಾರಸು ಮಾಡುತ್ತೇನೆ. ಸಾಮಾನ್ಯವಾಗಿ ವೈರ್ಲೆಸ್ ಅಥವಾ ಬ್ಲೂಟೂತ್ ಇಯರ್ಪಾಡ್ಗಳಲ್ಲಿ ಹೆಚ್ಚಿನ ರೇಡಿಯೊ ಫ್ರೀಕ್ವೆನ್ಸಿ ಎಮಿಷನ್ ಇರುತ್ತದೆ. ಶಬ್ದದ ವರ್ಗಾವಣೆಯೂ ಹೆಚ್ಚು ಇರುತ್ತದೆ. ಇದು ಇಯರ್ ಡ್ರಮ್ ಮತ್ತು ಇಯರ್ ನರ್ವ್ಗೆ ಅಪಾಯಕಾರಿ ಎಂದು ಡಾ. ಚೈತನ್ಯ ವದ್ವ ಅಭಿಪ್ರಾಯಪಟ್ಟಿದ್ದಾರೆ.
ಕಿವಿಯ ಒಳಭಾಗದಲ್ಲಿ ಹಿಯರಿಂಗ್ ನರ್ವ್ ಇರುತ್ತದೆ. ಅದರ ಮೇಲಿರುವ ಸಣ್ಣ ಹೇರ್ ಸೆಲ್ಗಳು ನಮಗೆ ಕೇಳಲು ನೆರವಾಗುತ್ತವೆ. ಅಧಿಕ ರೇಡಿಯೊ ಫ್ರೀಕ್ವೆನ್ಸಿಯ ಅಲೆಗಳಿಂದ ಈ ಹೇರ್ ಸೆಲ್ಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಬ್ಲೂಟೂತ್ ಇಯರ್ಪಾಡ್ಗಳಲ್ಲಿ ಎಮಿಷನ್ ಹೆಚ್ಚಿರುತ್ತದೆ. ವೈರ್ಡ್ ಇಯರ್ಫೋನ್ಗಳಲ್ಲಿಯೂ ಎಮಿಷನ್ ಇರುತ್ತದೆ. ಆದರೆ ಬ್ಲೂಟೂತ್ಗೆ ಹೋಲಿಸಿದರೆ ಅದು ಕಡಿಮೆ.
ಆದರೆ ಬ್ಲೂಟೂತ್ ಹಾಗೂ ವೈರ್ಡ್ ಇಯರ್ಫೋನ್ ಎರಡರಲ್ಲೂ ಶಬ್ದದ ಅಲೆಗಳು ಕಿವಿಗೆ ಅತ್ಯಂತ ಸಮೀಪದಿಂದ ತಲುಪುತ್ತವೆ. ಹೆಡ್ಫೋನ್ಗಳಲ್ಲಿ ಮಾತ್ರ ಅವು ಕಿವಿಯ ಹೊರಭಾಗದಲ್ಲಿರುವುದರಿಂದ ಈ ಅನನುಕೂಲತೆ ಕಡಿಮೆ ಇರುತ್ತದೆ.
ಅನಿವಾರ್ಯವಾದರೆ ನಾಯ್ಸ್ ಕ್ಯಾನ್ಸಲೇಶನ್ ಹೆಡ್ಫೋನ್ ಉತ್ತಮ ಆಯ್ಕೆ
ನಾಯ್ಸ್ ಕ್ಯಾನ್ಸಲೇಶನ್ ಹೆಡ್ಫೋನ್ಗಳಿಗೆ ಎರಡು ಪ್ರಮುಖ ಅನುಕೂಲತೆಗಳಿವೆ. ಮೊದಲನೆಯದಾಗಿ, ಅವು ಕಿವಿಯ ಹೊರಭಾಗದಲ್ಲಿ ಇರುವುದರಿಂದ ಇಯರ್ ಕೆನಾಲ್ಗೆ ಸಂಬಂಧಿಸಿದ ತೊಂದರೆ ಇರುವುದಿಲ್ಲ. ಎರಡನೆಯದಾಗಿ, ಹೊರಗಿನ ಶಬ್ದವನ್ನು ಕಡಿಮೆ ಮಾಡುವುದರಿಂದ ಕಡಿಮೆ ಧ್ವನಿಮಟ್ಟದಲ್ಲಿಯೇ ಬಳಸಬಹುದು.
ಹೀಗಾಗಿ ವೈರ್ಲೆಸ್ ಇಯರ್ಫೋನ್, ವೈರ್ಡ್ ಇಯರ್ಫೋನ್ ಹಾಗೂ ಹೆಡ್ಫೋನ್ಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎಂದು ಕೇಳಿದರೆ, ನಾಯ್ಸ್ ಕ್ಯಾನ್ಸಲೇಶನ್ ಹೊಂದಿರುವ ಹೆಡ್ಫೋನ್ಗಳು ಉತ್ತಮ ಎಂದು ಡಾ. ಚೈತನ್ಯ ವದ್ವ ಸಲಹೆ ನೀಡಿದ್ದಾರೆ.






