ಮಕ್ಕಳಿಗೆ ಮಲೇರಿಯ ಅಪಾಯಕಾರಿ ಏಕೆ? ವೈದ್ಯರು ಹೇಳುವುದೇನು?

ಸಾಂದರ್ಭಿಕ ಚಿತ್ರ | Photo Credit : freepik.com
ಮಕ್ಕಳು ಮಲೇರಿಯ ಸೋಂಕಿಗೆ ಒಳಗಾದಾಗ ವಯಸ್ಕರಿಗಿಂತ ಹೆಚ್ಚು ಮಾರಕ ಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ದೇಶದಲ್ಲಿ ಕಂಡುಬರುವ ಮಲೇರಿಯದಂತಹ ಸೊಳ್ಳೆಗಳಿಂದ ಹರಡುವ ರೋಗಗಳು, ವಿಶೇಷವಾಗಿ ಮಕ್ಕಳಿಗೆ, ಮಾರಕವಾಗಿ ಪರಿಣಮಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಜೂನ್ ತಿಂಗಳನ್ನು ದೇಶದಲ್ಲಿ ಮಲೇರಿಯಾ ವಿರೋಧಿ ತಿಂಗಳಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಧುಕರ್ ರೇನ್ಬೋ ಮಕ್ಕಳ ಆಸ್ಪತ್ರೆಯ ಪೀಡಿಯಾಟ್ರಿಕ್ ಸಲಹೆಗಾರ ಡಾ. ಅಂಕುರ್ ಓಹ್ರಿ ಮತ್ತು ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಕನ್ಸಲ್ಟಂಟ್ ಅಮಿತ್ ಪ್ರಕಾಶ್ ಸಿಂಗ್ ಅವರು ಮಕ್ಕಳನ್ನು ಮಲೇರಿಯಕ್ಕೆ ಗುರಿಯಾಗಿಸುವ ಕಾರಣಗಳನ್ನು ವಿವರಿಸಿದ್ದಾರೆ.
►ಮಲೇರಿಯ ಮಕ್ಕಳ ಮೇಲೆ ಏಕೆ ಹೆಚ್ಚು ಪರಿಣಾಮ ಬೀರುತ್ತದೆ?
ಮಕ್ಕಳು ಮಲೇರಿಯ ಸೋಂಕಿಗೆ ಒಳಗಾದಾಗ ವಯಸ್ಕರಿಗಿಂತ ಹೆಚ್ಚಿನ ಅನಾರೋಗ್ಯದ ತೀವ್ರತೆಯನ್ನು ಅನುಭವಿಸುತ್ತಾರೆ. "ಮಲೇರಿಯ ಪರಾವಲಂಬಿಗಳು ಕೆಂಪು ರಕ್ತಕಣಗಳನ್ನು ಸೋಂಕಿಗೆ ಒಳಪಡಿಸಿ ನಾಶಮಾಡುತ್ತವೆ. ಪರಿಣಾಮವಾಗಿ ಆಮ್ಲಜನಕವನ್ನು ಸಾಗಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಗುವಿನ ಸಣ್ಣ ದೇಹದ ರಿಸರ್ವ್ ಮತ್ತು ಹೆಚ್ಚಿನ ಚಯಾಪಚಯ ದರವು ಆರೋಗ್ಯ ಸ್ಥಿತಿ ಬಿಗಡಾಯಿಸಲು ಕಾರಣವಾಗುತ್ತದೆ" ಎಂದು ಡಾ. ಅಂಕುರ್ ಅಭಿಪ್ರಾಯಪಟ್ಟಿದ್ದಾರೆ.
ಡಾ. ಅಮಿತ್ ಪ್ರಕಾಶ್ ಅವರ ಪ್ರಕಾರ, ಮಕ್ಕಳ ರೋಗನಿರೋಧಕ ಶಕ್ತಿ ಇನ್ನೂ ಪ್ರಬುದ್ಧವಾಗುವ ಸ್ಥಿತಿಯಲ್ಲಿರುವ ಕಾರಣ ಮಲೇರಿಯದಿಂದ ಹೆಚ್ಚು ಅಪಾಯ ಹೊಂದಿರುತ್ತಾರೆ. "ಮಲೇರಿಯ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಅನೇಕ ವಯಸ್ಕರು ಮಲೇರಿಯಕ್ಕೆ ಪದೇಪದೆ ಒಡ್ಡಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಆದರೆ ಚಿಕ್ಕ ಮಕ್ಕಳು ಮಲೇರಿಯಕ್ಕೆ ಪದೇಪದೆ ಒಡ್ಡಿಕೊಂಡರೂ ಯಾವುದೇ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದಿಲ್ಲ" ಎಂದು ಅವರು ಅಭಿಪ್ರಾಯಪಟ್ಟರು.
ಮಕ್ಕಳು ಸಾಮಾನ್ಯವಾಗಿ ಹೆಚ್ಚಿನ ಸಮಯವನ್ನು ಮನೆಗಳಿಂದ ಹೊರಗೆ ಕಳೆಯುವ ಕಾರಣ ರೋಗಕ್ಕೆ ಬೇಗನೇ ಗುರಿಯಾಗಬಹುದು. ರೋಗವನ್ನು ಗುರುತಿಸುವುದು ಮತ್ತು ತುರ್ತು ವೈದ್ಯಕೀಯ ಆರೈಕೆ ಪಡೆಯಲು ಅವರು ತಮ್ಮ ಆರೈಕೆದಾರರನ್ನೇ ಅವಲಂಬಿಸಿರುತ್ತಾರೆ. ವಿಳಂಬವಾದ ರೋಗ ನಿರ್ಣಯ, ಸ್ವ-ಚಿಕಿತ್ಸೆ ಅಥವಾ ಮಗುವಿಗೆ ಸಾಮಾನ್ಯ ವೈರಲ್ ಜ್ವರವಿದೆ ಎನ್ನುವ ಊಹೆಯಲ್ಲಿ ಔಷಧಿ ನೀಡುವ ಕಾರಣ, ಮಲೇರಿಯವು ಸೌಮ್ಯ ಸ್ಥಿತಿಯಿಂದ ಗಂಭೀರ ಸ್ಥಿತಿಗೆ ಪರಿವರ್ತನೆಗೊಳ್ಳಲು ಕಾರಣವಾಗುತ್ತದೆ.
►ಮಲೇರಿಯ ತಡೆಗಟ್ಟುವ ಕ್ರಮಗಳು
ಮಲೇರಿಯ ಮಗುವಿಗೆ ಹರಡಿದಾಗ, ಪರಾವಲಂಬಿಗಳು ಮಗುವಿನ ರಕ್ತದಲ್ಲಿ ತ್ವರಿತವಾಗಿ ಮತ್ತು ವ್ಯಾಪಕವಾಗಿ ದ್ವಿಗುಣಗೊಳ್ಳಬಹುದು. ಕೆಂಪು ರಕ್ತಕಣಗಳ ಸಂಖ್ಯೆ ಗಮನಾರ್ಹವಾಗಿ ಇಳಿಯಬಹುದು. ಇದರಿಂದ ತೀವ್ರ ರಕ್ತಹೀನತೆ ಉಂಟಾಗಬಹುದು.
ಮಾತ್ರವಲ್ಲದೆ, ಮಲೇರಿಯವು ಇತರ ಅಂಗಗಳ ಮೇಲೂ ಪರಿಣಾಮ ಬೀರಬಹುದು. ಉಸಿರಾಟದ ತೊಂದರೆ, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು, ಡಿಹೈಡ್ರೇಶನ್ ಉಂಟಾಗಬಹುದು ಮತ್ತು ಮಲೇರಿಯದ ತೀವ್ರ ಪ್ರಕರಣಗಳಲ್ಲಿ ಮೆದುಳಿಗೂ ಜ್ವರ ಬರಬಹುದು. ಪರಿಣಾಮವಾಗಿ ಕೋಮಾ ಮತ್ತು/ಅಥವಾ ಶಾಶ್ವತ ಮೆದುಳಿನ ಗಾಯಗಳು ಉಂಟಾಗಬಹುದು.
ಮಕ್ಕಳಲ್ಲಿ ಮಲೇರಿಯದ ಆರಂಭಿಕ ಲಕ್ಷಣಗಳಲ್ಲಿ ಜ್ವರ, ಆಯಾಸ, ಕಿರಿಕಿರಿ, ವಾಂತಿ ಮತ್ತು ಆಹಾರ ಸೇವಿಸುವಲ್ಲಿ ತೊಂದರೆ ಕಂಡುಬರಬಹುದು. ಬಾಲ್ಯದ ಸಾಮಾನ್ಯ ರೋಗಗಳ ಲಕ್ಷಣಗಳೂ ಇವೇ ಆಗಿರುವುದರಿಂದ, ಪೋಷಕರು ಸಾಮಾನ್ಯವಾಗಿ ವೈದ್ಯಕೀಯ ಆರೈಕೆಯಲ್ಲಿ ವಿಳಂಬ ಮಾಡಬಹುದು. ಆದರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅಗತ್ಯ.
ಸೊಳ್ಳೆ ನಿಯಂತ್ರಣ, ಕೀಟನಾಶಕ ಚಿಕಿತ್ಸೆ ಪಡೆದ ಹಾಸಿಗೆ-ಪರದೆಗಳ ಬಳಕೆ, ಸಕಾಲಿಕ ರೋಗ ನಿರ್ಣಯ ಮತ್ತು ಆರಂಭದಲ್ಲೇ ಚಿಕಿತ್ಸೆ ನೀಡುವಂತಹ ತಡೆಗಟ್ಟುವ ಕ್ರಮಗಳು ಮಕ್ಕಳನ್ನು ತೀವ್ರ ಮಲೇರಿಯದಿಂದ ರಕ್ಷಿಸಲು ಮತ್ತು ಸಂಬಂಧಿತ ಸಮಸ್ಯೆಗಳು ಉಂಟಾಗದಂತೆ ತಡೆಯಲು ಸಹಕಾರಿಯಾಗುತ್ತವೆ.
ಸೂಚನೆ: ಈ ಲೇಖನವನ್ನು ವಿವಿಧ ಮಾಧ್ಯಮಗಳ ಮೂಲಗಳಿಂದ ಪಡೆದು ಮಾಹಿತಿಯ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ದಯವಿಟ್ಟು ವೈದ್ಯಕೀಯ ಸಮಸ್ಯೆಗಳಿಗೆ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.






