ಬೇಸಗೆಯಲ್ಲಿ ತರಕಾರಿಗಳನ್ನು ಸಂಗ್ರಹಿಸಿಡುವುದು ಹೇಗೆ?

Photo: Freepik
ತರಕಾರಿಗಳನ್ನು ತಾಜಾ ಉತ್ಪನ್ನಗಳು ಎಂದು ಭಾವಿಸಬೇಕೇ ವಿನಾ ಕಪಾಟಿನಲ್ಲಿ ತೆಗೆದಿಡುವ ವಸ್ತುಗಳಲ್ಲ.
ಭಾರತದ ಆಹಾರ ನಿಯಂತ್ರಕ ಪ್ರಾಧಿಕಾರವಾಗಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಈ ಬೇಸಗೆಯಲ್ಲಿ ತರಕಾರಿಗಳನ್ನು ತಾಜಾ, ಸುರಕ್ಷಿತ ಮತ್ತು ಪೌಷ್ಠಿಕಾಂಶಗಳಿಂದ ತುಂಬಿರುವಂತೆ ಸಂಗ್ರಹಿಸಿಡುವ ಕುರಿತಾಗಿ ಸಲಹೆ ಬಿಡುಗಡೆ ಮಾಡಿದೆ.
“ಬೇಸಗೆಯಿಂದ ನಿಮ್ಮ ತರಕಾರಿಗಳು ಹಾಳಾಗದಿರಲಿ. ಅವುಗಳನ್ನು ತಾಜಾ, ಸುರಕ್ಷಿತ ಮತ್ತು ದೀರ್ಘಕಾಲದವರೆಗೆ ಪೌಷ್ಠಿಕವಾಗಿ ಕಾಪಾಡಿ” ಎಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
►ಈ ಕೆಳಗಿನ ಕ್ರಮಗಳನ್ನು ಅದು ಸೂಚಿಸಿದೆ:
► ಹಸಿರೆಲೆ ತರಕಾರಿಗಳನ್ನು ಸ್ವಚ್ಛವಾಗಿ ತೊಳೆದು ಸೂಕ್ತವಾಗಿ ಒಣಗಿಸಿಡಿ.
► ತರಕಾರಿಗಳನ್ನು ಸ್ವಚ್ಛ ಕಾಗದದಲ್ಲಿ ಸುತ್ತಿಡಿ (ದಿನಪತ್ರಿಕೆ ಬೇಡ).
► ಅವುಗಳನ್ನು ಬಲೆ ಅಥವಾ ತೂತಿರುವ ಬ್ಯಾಗ್ ಗಳಲ್ಲಿ ಸಂಗ್ರಹಿಸಿಡಿ.
“ಜಾಣತನದಿಂದ ಸಂಗ್ರಹಿಸಲು ಪ್ರಾರಂಭಿಸಿ” ಎನ್ನುವ ಸಂದೇಶವನ್ನು FSSAI ಹಾಕಿದೆ.
ಈ ಬಗ್ಗೆ ಮಹಾರಾಷ್ಟ್ರದ ಥಾಣೆಯ ಕಿಮ್ಸ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ಡಾ. ಅಮ್ರೀನ್ ಶೇಖ್ ಹೇಳುವಂತೆ, “ಬೇಸಗೆಯ ಧಗೆಯಲ್ಲಿ ತರಕಾರಿಗಳು ಬೇಗನೇ ತಾಜಾತನ ಕಳೆದುಕೊಳ್ಳುತ್ತವೆ. ಅಧಿಕ ತಾಪಮಾನ ಮತ್ತು ತೇವಾಂಶವು ಅವುಗಳಲ್ಲಿ ತೇವಾಂಶ ನಷ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳು ವೇಗವಾಗಿ ಬೆಳೆಯಲು ಅವಕಾಶ ಸಿಗುತ್ತದೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ತಾಜಾವಾಗಿ ಕಂಡ ತರಕಾರಿಗಳು ಮನೆಯಲ್ಲಿ ಸಂಗ್ರಹಿಸಿದ ಕೆಲವೇ ದಿನಗಳಲ್ಲಿ ಹಾಳಾಗುತ್ತವೆ.”
ಬಹಳಷ್ಟು ಮಂದಿ ತರಕಾರಿಗಳನ್ನು ತೊಳೆದು ನೇರವಾಗಿ ಫ್ರಿಜ್ನಲ್ಲಿ ಇಡುತ್ತಾರೆ. ಆದರೆ ಹೆಚ್ಚು ತೇವಾಂಶದಿಂದಲೂ ಸಮಸ್ಯೆಯಾಗಬಹುದು. ಅವರ ಪ್ರಕಾರ, “ಮೇಲ್ಮೈ ಮೇಲೆ ನೀರು ಉಳಿದಿದ್ದರೆ ತಂಪಾದ ಪರಿಸರದಲ್ಲಿ ಬೇಗನೇ ಹಾಳಾಗಬಹುದು. ತೊಳೆದ ನಂತರ ಸ್ವಲ್ಪ ಒಣಗಿಸಿ ನಂತರ ಸಂಗ್ರಹಿಸಿಡುವುದರಿಂದ ದೀರ್ಘಕಾಲ ತಾಜಾವಾಗಿ ಇರಬಹುದು.”
►ಕಾಗದದಲ್ಲಿ ಸುತ್ತಿಡಲು ಸಲಹೆ ನೀಡಿರುವುದು ಸರಿಯೇ?
“ಸಂಗ್ರಹದ ಸಂದರ್ಭದಲ್ಲಿ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಕಾಗದ ನೆರವಾಗುತ್ತದೆ. ಎಲೆಗಳು ಹೆಚ್ಚು ಒದ್ದೆಯಾಗಿ ಲೋಳೆಯಾಗದಂತೆ ತಡೆಯುತ್ತದೆ. ಇದು ಸರಳ ಹಂತವಾಗಿದ್ದರೂ, ದೀರ್ಘ ಸಮಯ ತಾಜಾತನ ಮತ್ತು ರಚನೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ” ಎನ್ನುತ್ತಾರೆ ವೈದ್ಯರು.
►ತೂತಿರುವ ಬ್ಯಾಗ್ ಏಕೆ ಬಳಸಬೇಕು?
ವೈದ್ಯರ ಪ್ರಕಾರ, ತರಕಾರಿಗಳಿಗೂ ಗಾಳಿಯಾಡಬೇಕಾಗುತ್ತದೆ. “ಪ್ಲಾಸ್ಟಿಕ್ ಒಳಗೆ ಸಂಪೂರ್ಣವಾಗಿ ತುಂಬಿಡುವುದು ತೇವಾಂಶವನ್ನು ಹಿಡಿದಿಡಬಹುದು ಮತ್ತು ಕಂಡೆನ್ಸೇಶನ್ (ಸಾಂದ್ರೀಕರಣ) ಉಂಟಾಗಬಹುದು. ವಿಶೇಷವಾಗಿ ಬೇಸಗೆಯಲ್ಲಿ ಬಲೆ ಅಥವಾ ತೂತಿರುವ ಚೀಲಗಳು ಸ್ವಲ್ಪ ಗಾಳಿಯ ಪ್ರಸರಣವನ್ನು ಅನುಮತಿಸುತ್ತವೆ ಮತ್ತು ಬೇಗನೇ ಹಾಳಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ” ಎನ್ನುತ್ತಾರೆ.
►ಸಂಗ್ರಹದಲ್ಲಿ ಆಗುವ ಸಾಮಾನ್ಯ ತಪ್ಪುಗಳೇನು?
ಒಂದು ಸಾಮಾನ್ಯ ತಪ್ಪೆಂದರೆ ತರಕಾರಿಗಳ ಅಗತ್ಯವನ್ನು ಗಮನಿಸದೆ ಎಲ್ಲಾ ತರಕಾರಿಗಳನ್ನು ಜೊತೆಯಾಗಿ ತೆಗೆದಿಡುವುದು. ಫ್ರಿಜ್ನಲ್ಲಿ ವಸ್ತುಗಳನ್ನು ತುರುಕಿಡುವುದು. “ಜಾಗವಿಲ್ಲದಂತೆ ತುರುಕಿದರೆ ಗಾಳಿಯಾಡುವುದಿಲ್ಲ ಮತ್ತು ತಾಜಾತನ ಕಡಿಮೆಯಾಗಬಹುದು. ಜನರು ಬಹಳಷ್ಟು ಬಾರಿ ಹಾನಿಗೊಳಗಾದ ತರಕಾರಿಯನ್ನು ತೆಗೆದುಹಾಕುವುದಿಲ್ಲ. ಒಂದು ಹಾಳಾದರೆ ಸಮೀಪದ ಇತರ ತರಕಾರಿಗಳೂ ಹಾನಿಗೊಳಗಾಗಬಹುದು” ಎನ್ನುತ್ತಾರೆ ವೈದ್ಯರು.
ತರಕಾರಿಗಳನ್ನು ತಾಜಾ ಉತ್ಪನ್ನಗಳು ಎಂದು ಭಾವಿಸಬೇಕೇ ವಿನಾ ಕಪಾಟಿನಲ್ಲಿ ತೆಗೆದಿಡುವ ವಸ್ತುಗಳಲ್ಲ. ಹೆಚ್ಚುವರಿ ತೇವಾಂಶವನ್ನು ತೆಗೆದುಹಾಕುವುದು, ಅವುಗಳನ್ನು ಸರಿಯಾಗಿ ಸಂಗ್ರಹಿಸುವುದು ಮತ್ತು ಸಮಯಕ್ಕೆ ಬಳಸುವಂತಹ ಸಣ್ಣ ಅಭ್ಯಾಸಗಳು ಬೇಕಾಗುತ್ತವೆ.






