ಮಾನಸಿಕ ಆರೋಗ್ಯದ ರಿಸೆಟ್ಗೆ 30 ನಿಮಿಷದ ಮೌನ!; ಏನಿದು ಶವಪೆಟ್ಟಿಗೆಯಲ್ಲಿ ಮಲಗುವ ಟ್ರೆಂಡ್?

Image: AI Generative
ತಜ್ಞರ ಪ್ರಕಾರ ಶವಪೆಟ್ಟಿಗೆಯಲ್ಲಿ ಮಲಗಿದಾಗ ಒಂದು ಸ್ಪಷ್ಟ ಪರಿಕಲ್ಪನೆ ಮೂಡುತ್ತದೆ. ಜೀವನಕ್ಕೆ ಸೀಮಿತ ಸಮಯವಿದೆ ಎಂದು ಗುರುತಿಸಿದಾಗ ಸ್ವಯಂ ಬಗ್ಗೆ ಅರ್ಥೈಸಿಕೊಳ್ಳುವುದು ಸಾಧ್ಯವಾಗಲಿದೆ.
ಧ್ಯಾನದಂತಹ ಯೋಗಕ್ಷೇಮದ ಪ್ರವೃತ್ತಿಗಳು ಸಾಮಾನ್ಯವಾಗಿ ಶಾಂತಿ, ಸ್ಪಷ್ಟತೆ ಮತ್ತು ದೈನಂದಿನ ಜೀವನದ ಗದ್ದಲದಿಂದ ವಿರಾಮದ ಭರವಸೆ ನೀಡುತ್ತವೆ. ಆದರೆ ಕೆಲವೊಂದು ಅಸಹಜವೆನಿಸುವ ಪ್ರವೃತ್ತಿಯಿಂದಲೂ ಜೀವನದಲ್ಲಿ ಶಾಂತಿಯನ್ನು ಕಂಡುಕೊಳ್ಳಬಹುದು. ಇದೀಗ ಅಂತಹುದೇ ಒಂದು ಪ್ರವೃತ್ತಿ ವೈರಲ್ ಆಗುತ್ತಿದೆ. ಅದೆಂದರೆ, ಶವಪೆಟ್ಟಿಗೆಯಲ್ಲಿ ಮಲಗುವ ಪ್ರವೃತ್ತಿ! ಶವಪೆಟ್ಟಿಗೆಯೊಳಗೆ ಸುಮಾರು 30 ನಿಮಿಷಗಳ ಕಾಲ ವಿಶ್ರಾಂತಿ ಪಡೆಯುವ ಪರಿಕಲ್ಪನೆ ಜಪಾನ್ನಿಂದ ಹುಟ್ಟಿಕೊಂಡಿದೆ.
ಸದಾ ಗುಣುಗುಟ್ಟುವ ಫೋನ್, ಬ್ಯುಸಿ ಜೀವನದಿಂದ ವಿಶ್ರಾಂತಿ ಪಡೆಯಲು, ಸಂಪರ್ಕ ಕಡಿತಗೊಳಿಸಲು, ಜೀವನ ಮತ್ತು ಸಾವಿನ ಬಗ್ಗೆ ಶಾಂತಿಯಿಂದ ಆಲೋಚಿಸಲು ಜಪಾನಿಗರು ಹೀಗೆ ಶವಪೆಟ್ಟಿಗೆಯಲ್ಲಿ ಮಲಗುತ್ತಾರೆ. ಜಪಾನ್ನ ಅಂತ್ಯಕ್ರಿಯೆಯ ಮನೆಯಲ್ಲಿ ಈ ಪ್ರವೃತ್ತಿ ಆರಂಭವಾಗಿದೆ. ನಂತರ ವಿಶ್ವಾದ್ಯಂತ ಹರಡುತ್ತಿದೆ.
ಜಪಾನ್ನಲ್ಲಿ ಹೆಚ್ಚಾಗುತ್ತಿರುವ ಆತ್ಮಹತ್ಯೆಗಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಮಾನಸಿಕ ಆರೋಗ್ಯದ ಮಧ್ಯಪ್ರವೇಶವೆಂದೂ ಪರಿಗಣಿಸಲಾಗುತ್ತಿದೆ. ಹೀಗೆ ಶವಪೆಟ್ಟಿಗೆಯಲ್ಲಿ ತಮಗೆ ಇಷ್ಟವಾದಷ್ಟು ಹೊತ್ತು ವ್ಯಕ್ತಿಗಳು ಮೌನವಾಗಿ ಮಲಗುತ್ತಾರೆ. ಮೃದುವಾದ ಸಂಗೀತ ಕೇಳುತ್ತದೆ. ಪ್ರೀತಿ-ಪಾತ್ರರ ಬಗ್ಗೆ ಆಲೋಚಿಸುವುದು ಮತ್ತು ವಿದಾಯ ಹೇಳುವುದು ಹೇಗೆ ಎಂದು ಊಹಿಸಿಕೊಳ್ಳಲು ಈ ಕ್ಷಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜಪಾನ್ನ ಟೋಕಿಯೊ ಮತ್ತು ದಕ್ಷಿಣ ಕೊರಿಯಾದ ಸಿಯೋಲ್ನಂತಹ ನಗರಗಳಲ್ಲಿ ಕಂಪನಿಗಳು ಆಯೋಜಿಸುವ ಈ ‘ಸಜೀವ ಅಂತ್ಯಕ್ರಿಯೆ’ಗಳ ಪರಿಕಲ್ಪನೆಗಳು ಹೆಚ್ಚು ಅಸ್ತಿತ್ವದಲ್ಲಿವೆ.
ಮರಣವನ್ನು ನೇರವಾಗಿ ಎದುರಿಸಲು ಪ್ರೋತ್ಸಾಹ
ತಜ್ಞರು ಹೇಳುವ ಪ್ರಕಾರ, ಸಾವನ್ನು ಎದುರಿಸುವುದು ಎನ್ನುವ ಒಂದೇ ಒಂದು ಉತ್ತರವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾಗಿರುತ್ತಾನೆ. ಯಾರಾದರೂ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಅವರ ವಿಶ್ವ ದೃಷ್ಟಿಕೋನ, ವ್ಯಕ್ತಿತ್ವ ಮತ್ತು ವಿಷಯಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರಿಗೆ ವಿಶೇಷವಾಗಿ ತತ್ವಶಾಸ್ತ್ರದಲ್ಲಿ ಹೆಚ್ಚು ಚಿಂತನಶೀಲ ಅಥವಾ ಆಸಕ್ತಿ ಹೊಂದಿರುವವರಿಗೆ ಇದು ಸಹಾಯ ಮಾಡುತ್ತದೆ. ನೇರವಾಗಿ ಆತಂಕವನ್ನು ಕಡಿಮೆ ಮಾಡುವುದಿಲ್ಲ, ಆದರೆ ಅರ್ಥ ಅಥವಾ ದೃಷ್ಟಿಕೋನದ ಅರ್ಥವನ್ನು ನೀಡುವ ಮೂಲಕ ಮನಸ್ಸಿಗೆ ಶಾಂತಿಕೊಡುತ್ತದೆ.”
ಆದರೆ ಕೆಲವರಿಗೆ ಈ ರೀತಿ ಶವಪೆಟ್ಟಿಗೆಯಲ್ಲಿ ಮಲಗುವುದು ಅಹಿತಕರ ಭಾವನೆ ಮತ್ತು ಹೇಗೆ ಸಾಯುವುದು ಎನ್ನುವುದನ್ನು ನೆನಪಿಸಬಹುದು. ಭಾರವಾದ ಭಾವನೆ ಮತ್ತು ಅದೇ ಸಮಯದಲ್ಲಿ ಎಲ್ಲದರಿಂದ ಮುಕ್ತವಾದ ಭಾವನೆ ಬಂದು ಅಹಿತಕರವೆನಿಸಬಹುದು. ಸಂವೇದನೆಯ ಅಭಾವ, ಮೌನ ಮತ್ತು ಭಾವನಾತ್ಮಕವಾಗಿ ಪ್ರಚೋದಿಸುವ ಸಂಗೀತವು ಮೆದುಳಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದು ಮುಖ್ಯವಾಗುತ್ತದೆ.
ಈ ಅಭ್ಯಾಸಗಳು ನಿಮಗೆ ಒಳಮುಖವಾಗಿ ತಿರುಗಲು ನೆರವಾಗಬಹುದು. ಮೌನ, ಕಡಿಮೆ ಸಂವೇದನೆ ಮತ್ತು ಕೆಲವೊಮ್ಮೆ ಸಂಗೀತದ ಕಡೆಗೆ ಗಮನ ಹರಿಸುವುದರಿಂದ ಹೊರಗಿನಿಂದ ಆಂತರಿಕ ಶುದ್ಧಿಯತ್ತ ಗಮನ ಹೊರಳುತ್ತದೆ. ನಿಮ್ಮೊಳಗೆ ಏನು ನಡೆಯುತ್ತಿದೆ ಎಂಬುದರ ಕಡೆಗೆ ಗಮನ ಹರಿಸಬಹುದಾಗಿದೆ. ಆಗ ನೀವು ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಹೆಚ್ಚು ಸ್ಪಷ್ಟವಾಗಿ ಗಮನಿಸಲು ಸಾಧ್ಯವಾಗಲಿದೆ. ಅವುಗಳನ್ನು ಹೇಗೆ ಅನುಭವಿಸುತ್ತೇವೆ ಮತ್ತು ಹೇಗೆ ಗಮನಿಸುತ್ತೇವೆ ಎನ್ನುವುದು ತಿಳಿದುಬರುತ್ತದೆ.
ಆದರೆ ಹೆಚ್ಚು ರಚನಾತ್ಮಕ ಸಂಶೋಧನೆ ಇಲ್ಲದ ಕಾರಣ ಶವಪೆಟ್ಟಿಗೆಯಲ್ಲಿ ಮಲಗುವುದು ಎಲ್ಲರಿಗೂ ಸೂಕ್ತವೆ ಎಂದು ಹೇಳುವುದು ಕಷ್ಟ. ವಿಭಿನ್ನ ಜನರು ವಿಭಿನ್ನ ವಿಧಾನಗಳಿಗೆ ಪ್ರತಿಕ್ರಿಯಿಸುತ್ತಾರೆ. ಸಾವನ್ನು ತಪ್ಪಿಸದೆ ಅನಿವಾರ್ಯವೆಂದು ಸ್ವೀಕರಿಸುವುದು ಬಹಳಷ್ಟು ಮಂದಿಗೆ ಕಷ್ಟವಾಗಬಹುದು.
ತಜ್ಞರ ಪ್ರಕಾರ ಶವಪೆಟ್ಟಿಗೆಯಲ್ಲಿ ಮಲಗಿದಾಗ ಒಂದು ಸ್ಪಷ್ಟ ಪರಿಕಲ್ಪನೆ ಮೂಡುತ್ತದೆ. ಜೀವನಕ್ಕೆ ಸೀಮಿತ ಸಮಯವಿದೆ ಎಂದು ಗುರುತಿಸಿದಾಗ ಸ್ವಯಂ ಬಗ್ಗೆ ಅರ್ಥೈಸಿಕೊಳ್ಳುವುದು ಸಾಧ್ಯವಾಗಲಿದೆ. ಆದರೆ ಕೆಲವು ಮಂದಿಗೆ ಧ್ಯಾನದಂತಹ ಸುರಕ್ಷಿತ ಮತ್ತು ಹೆಚ್ಚು ಅರ್ಥಪೂರ್ಣ ಅಭ್ಯಾಸಗಳು ಮಾತ್ರ ನೆರವಾಗಬಹುದು.
ಕೃಪೆ: indianexpress.com







