‘‘ಆರೋಗ್ಯಕ್ಕಾಗಿ ಒಟ್ಟಾಗಿ, ವಿಜ್ಞಾನದೊಂದಿಗೆ ನಿಲ್ಲೋಣ’’
ಇಂದು ವಿಶ್ವ ಆರೋಗ್ಯ ದಿನ

ಉತ್ತಮ ಆರೋಗ್ಯವು ಎಲ್ಲರ ಕನಸು ಕಾಣುವ ವಿಷಯ. ಆದರೆ, ದುರದೃಷ್ಟವಶಾತ್ ಎಲ್ಲರೂ ಉತ್ತಮ ಆರೋಗ್ಯ ರಕ್ಷಣೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಉತ್ತಮ ಆರೋಗ್ಯದ ಮಹತ್ವ ತಿಳಿಸಲು ಮತ್ತು ಎಲ್ಲರಿಗೂ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಲು ಪ್ರತೀ ವರ್ಷ ‘ವಿಶ್ವ ಆರೋಗ್ಯ ದಿನ’ವನ್ನು ಆಚರಿಸಲಾಗುತ್ತದೆ. ಎಲ್ಲರಿಗೂ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಹಲವು ವ್ಯಕ್ತಿಗಳ ಪರಿಶ್ರಮದಿಂದ ವಿಶ್ವ ಆರೋಗ್ಯ ಸಂಸ್ಥೆ 1948 ಎಪ್ರಿಲ್ 7ರಂದು ಜನ್ಮ ತಾಳಿತು. 1948ರಲ್ಲಿ ಜಿನೇವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗ ಸಭೆಯಲ್ಲಿ ವರ್ಷಕ್ಕೊಮ್ಮೆ ‘ವಿಶ್ವ ಆರೋಗ್ಯ ದಿನ’ವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು. 1950 ಎಪ್ರಿಲ್ 7ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತೀ ವರ್ಷವೂ ಒಂದು ವಿಷಯದ ಮೇಲ್ಪಂಕ್ತಿಯನ್ನು ಆರಿಸಿ, ಆ ವಿಷಯದ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ವಿಶ್ವದೆಲ್ಲೆಡೆ ಅನುಷ್ಠಾನಗೊಳಿಸಲು ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ. ಆರೋಗ್ಯದ ನಿಜವಾದ ಅರ್ಥ, ಕಾಳಜಿ ಹಾಗೂ ಸಮುದಾಯದ ಆರೋಗ್ಯ ಕಾಪಾಡಲು ವ್ಯಕ್ತಿ ಮಾಡಬೇಕಾದ ಕರ್ತವ್ಯದ ಬಗ್ಗೆ ಅರಿವು ಮೂಡಿದಾಗ ಮಾತ್ರ ಈ ದಿನಾಚರಣೆಯು ಸಾರ್ಥಕವಾಗಲು ಸಾಧ್ಯ. ಈ ಸಲದ ಆರೋಗ್ಯ ದಿನಾಚರಣೆಯ ಧ್ಯೇಯವಾಕ್ಯ ‘ಆರೋಗ್ಯಕ್ಕಾಗಿ ಒಟ್ಟಾಗಿ, ವಿಜ್ಞಾನದೊಂದಿಗೆ ನಿಲ್ಲೋಣ’
ಜಾಗತಿಕವಾಗಿ ತಗೆದುಕೊಳ್ಳುವ ರಾಜಕೀಯ, ಸಾಮಾಜಿಕ ಮತ್ತು ವಾಣಿಜ್ಯ ನಿರ್ಧಾರಗಳು ವಾತಾವರಣ ಮತ್ತು ಆರೋಗ್ಯದ ಅವಾಂತರಗಳ ಮೇಲೆ ಸವಾರಿ ಮಾಡುವವು. ಮಾಲಿನ್ಯಗಳು ಸಮುದ್ರದ ಆಳಗಳಲ್ಲೂ, ಪರ್ವತಗಳ ತುದಿಯಲ್ಲೂ ಶೇಖರಗೊಂಡಿರುವುದರ ಪರಿಣಾಮವಾಗಿ, ತಿನ್ನುವ ಆಹಾರದೊಡನೆ ಬೆರೆತು ಊಟದ ತಟ್ಟೆಗೆ ನಂತರ ಹೊಟ್ಟೆಗೆ ಸೇರಿ ಬೊಜ್ಜು, ಬೊಜ್ಜಿನಿಂದ ಬರುವ ರೋಗಗಳು, ಕ್ಯಾನ್ಸರ್, ಹೃದ್ರೋಗಗಳಿಗೆ ‘ರೆಡ್ ಕಾರ್ಪೆಟ್’ ಹಾಕಿ ಸ್ವಾಗತಿಸುತ್ತವೆ. ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ಧಮಾಲಿನ್ಯ, ಆಹಾರದಲ್ಲಿ ಕಲಬೆರಕೆ ದಿನದಿನಕ್ಕೆ ಹೆಚ್ಚುತ್ತಿವೆ. ಜೀವನಶೈಲಿಯ ಬದಲಾವಣೆಯಿಂದ ಉಂಟಾಗಿರುವ ರಕ್ತದೊತ್ತಡ, ಮಧುಮೇಹ, ಕೆಮ್ಮು, ದಮ್ಮು...ಮುಂತಾದ ರೋಗಗಳು ಏರು ಮುಖದಲ್ಲಿವೆ. ಸಾಂಕ್ರಾಮಿಕ ರೋಗಗಳ ಜೊತೆಗೆ ಅಸಾಂಕ್ರಾಮಿಕ ರೋಗಗಳೂ ಕೈ ಜೋಡಿಸಿ, ಹೆಜ್ಜೆ ಹಾಕುತ್ತಿವೆ. ಇಂದು ನೆಮ್ಮದಿ ನುಚ್ಚು ನೂರಾಗಿದೆ. ಕಂಡರಿಯದ ರೋಗಗಳ ಕಿಚ್ಚು ನಿಗಿ ನಿಗಿ ಅನ್ನುತ್ತಿದೆ. ಆತಂಕ ಅಬ್ಬರಿಸುತ್ತಿದೆ. ಪರಿಣಾಮ ಜಾಗತಿಕವಾಗಿ ವರ್ಷಂಪ್ರತಿ ಮಿಲಿಯನ್‌ಗಟ್ಟಲೆ ಜನರು ಬದುಕು ಮುಗಿಸುತ್ತಿದ್ದಾರೆ.
ಸಮಗ್ರ ಆರೋಗ್ಯಕ್ಕೆ ಪಂಚ ಸೂತ್ರಗಳು
ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಕೆಲವೊಂದು ಅಂಶಗಳು ತುಂಬಾ ಮಹತ್ವದ ಪಾತ್ರ ವಹಿಸುತ್ತವೆ. ಅವುಗಳು:
1.ಪುಷ್ಟಿಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ.
2. ಕುಡಿಯುವ ಪರಿಶುದ್ಧ ನೀರು.
3. ನಿರ್ಮಲ ಪರಿಸರ, ಸೋಂಕು ರೋಗಗಳ ವಿರುದ್ಧ ಲಸಿಕೆ
4. ಸೋಂಕು ರೋಗಗಳ ನಿಯಂತ್ರಣ ಮತ್ತು ದುಶ್ಚಟಗಳಿಂದ ದೂರವಿರುವುದು.
5. ಕುಟುಂಬ ಕಲ್ಯಾಣ ಸೇರಿದಂತೆ ತಾಯಿ ಮಕ್ಕಳ ಆರೋಗ್ಯ ರಕ್ಷಣೆ, ರೋಗ ಚಿಕಿತ್ಸೆ ಮತ್ತು ಆರೋಗ್ಯ ಪುನರ್ ಪ್ರತಿಷ್ಠಾಪನೆ.
‘ಜೀವನದ ಸುಖ ಅನುಭವಿಸುವುದಕ್ಕೆ ಆರೋಗ್ಯ ಜೀವ ಕೊಡುವ ಆತ್ಮವಾಗಿದ್ದು, ಅದಿಲ್ಲವಾದರೆ ಎಲ್ಲವೂ ಮಸುಕಾಗಿ ನೀರಸವಾಗಿ ಪರಿಣಮಿಸುತ್ತದೆ’ ಎಂದು ಸರ್ ಟಿಂಪಲ್ ನುಡಿದಿರುವುದು ಸಮಂಜಸವಾಗಿದೆ. ನಮ್ಮ ದೇಹಾರೋಗ್ಯದ ರಕ್ಷಣೆ ನಮ್ಮ ಕೈಯಲ್ಲಿದೆ. ಆರೋಗ್ಯ ಸರಿಯಿಲ್ಲದಿದ್ದರೆ ಕೋಟಿಗಟ್ಟಲೆ ಹಣವಿದ್ದು ಫಲವೇನು?
ಮಕ್ಕಳು ಆರೋಗ್ಯದಿಂದ ಸುಖಜೀವನವನ್ನು ದೀರ್ಘಕಾಲ ಮಾಡಬೇಕೆಂಬುದು ಪ್ರತಿಯೊಬ್ಬ ತಂದೆ-ತಾಯಿಗಳ ಅಪೇಕ್ಷೆ. ಅವರು ಆರೋಗ್ಯದಿಂದ ಬಲಗೊಳ್ಳುವುದು ಭವಿಷ್ಯದ ಬದುಕಿಗೆ ಬುನಾದಿ. ಆದುದರಿಂದಾಗಿಯೇ ಜೋಸೆಫ್ ಚೌಬರ್ನ್ ಹೇಳಿದ ಮಾತು- ‘‘ಮಗುವನ್ನು ಅದರ ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಬೆಳೆಸು.’’ ಇದು ಸತ್ಯ! ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಮಗುವಿನ ಜೀವನ, ಆರಂಭದಲ್ಲಿಯೇ ಮಗುಚಿ ಹೋಗುವುದಕ್ಕೆ ಬಿಡಬಾರದು. ಮಕ್ಕಳ ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರಿದರೆ ಮಕ್ಕಳು ಮಾರಕ ರೋಗಗಳಿಂದ ಜೀವ ಕಳೆದುಕೊಳ್ಳುವುದು ಮಾತ್ರವಲ್ಲದೆ ದೊಡ್ಡ ಸಂಖ್ಯೆಯ ಮಕ್ಕಳು ನ್ಯೂನಪೋಷಣೆ ಮತ್ತು ಅನಾರೋಗ್ಯದಿಂದ ಬದುಕಿ ಉಳಿದರೂ ಅದು ಅವರಲ್ಲಿ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದ ವಿಕಾಸಕ್ಕೆ ಅಡ್ಡಿಯೊಡ್ಡುವುದು. ಹಾಗಾಗಿ ಮಕ್ಕಳ ಬೆಳವಣಿಗೆಗೆ ಸೂಕ್ತ ಆಹಾರದ ಜೊತೆಗೆ ಮಾರಕ ರೋಗಗಳಿಂದ ಅವರನ್ನು ರಕ್ಷಿಸಲು ಸಕಾಲಕ್ಕೆ ಲಸಿಕೆಗಳನ್ನು ಕೊಡಿಸಬೇಕು.
ಮುಗಿಸುವ ಮುನ್ನ
ಮಕ್ಕಳನ್ನೂ ಆರೋಗ್ಯಕರ ಜೀವನಶೈಲಿ ಅನುಸರಿಸುವುದು, ಆರೋಗ್ಯವನ್ನು ಕಾಯ್ದುಕೊಂಡು ದೇಹದಾರ್ಡ್ಯವನ್ನು ಬೆಳೆಸಿಕೊಳ್ಳುವುದು ಎಲ್ಲ ವ್ಯಕ್ತಿಗಳ ಕರ್ತವ್ಯವಾಗಿದೆ. ‘ನಿಮ್ಮ ಆರೋಗ್ಯದ ರಕ್ಷಣೆ ಮಾಡಿಕೊಳ್ಳಿ, ನೀವು ಅದನ್ನು ಅಲಕ್ಷಿಸುವ ಅಧಿಕಾರ ಪಡೆದಿಲ್ಲ. ಹಾಗೆ ಮಾಡಿ ನಿಮಗೂ ಬಹುಶಃ ಇತರರಿಗೂ ಭಾರವಾಗಬೇಡಿ’ ಎಂದು ಇಂಗ್ಲಿಷ್ ಕವಿ ವಿಲಿಯಂ ಹಾಲ್ ಮಾಡಿದ ಸೂಚನೆಯ ಮಹತ್ವವಿಂದು ಎಲ್ಲರಿಗೂ ಮನವರಿಕೆಯಾಗಿದ್ದು, ‘ಜೀವನ ಬರೀ ಬಾಳುವುದಲ್ಲ. ಅದು ಚೆನ್ನಾಗಿ ಬಾಳುವುದಾಗಿದೆ’ ಎಂದು ತಿಳಿಯಲ್ಪಟ್ಟಿದೆ. ನಾವು ನಿಸರ್ಗಕ್ಕೆ ಸಹಕರಿಸಿ ನಮ್ಮ ದೇಹಪ್ರಕೃತಿಗೆ ಒಗ್ಗುವುದನ್ನು ಸೇವಿಸಿ ಬಲ ಪಡೆದು ಆರೋಗ್ಯವಂತರಾಗೋಣ, ಮೂಢನಂಬಿಕೆಗಳಿಗೆ ವಿದಾಯ ಹೇಳೋಣ, ವಿಜ್ಞಾನದ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳೋಣ. ಹಾಗಾದಾಗ ಮಾತ್ರ ವಿಶ್ವ ಆರೋಗ್ಯ ಸಂಸ್ಥೆಯ ಕನಸು ನನಸಾದೀತು.






