ಅಹ್ಮದಾಬಾದ್ ವಿಮಾನ ದುರಂತ: ಸಂತ್ರಸ್ತ ಕುಟುಂಬಗಳಿಗಾಗಿ ರೂ. 500 ಕೋಟಿ ಟ್ರಸ್ಟ್ ರಚಿಸಲಿರುವ ಟಾಟಾ ಸನ್ಸ್

PC: x.com/TataCompanies
ಮುಂಬೈ: ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಕಲ್ಯಾಣಕ್ಕಾಗಿ ಸುಮಾರು 500 ಕೋಟಿ ರೂಪಾಯಿ ಮೊತ್ತ ಹೊಂದಿದ ಟ್ರಸ್ಟ್ ರಚಿಸಲು ಏರ್ ಇಂಡಿಯಾ ಮಾತೃಸಂಸ್ಥೆಯಾದ ಟಾಟಾ ಸನ್ಸ್ ನಿರ್ಧರಿಸಿದೆ. ಎಐ171 ಹೆಸರಿನ ಟ್ರಸ್ಟ್ ಗೆ 500 ಕೋಟಿ ರೂಪಾಯಿ ಹಂಚಿಕೆ ಮಾಡಲು ಏರ್ ಇಂಡಿಯಾದಲ್ಲಿ ಶೇಕಡ 74ರಷ್ಟು ಪಾಲು ಹೊಂದಿರುವ ಟಾಟಾ ಸನ್ಸ್ ಮುಂದಾಗಿದೆ.
ಟಾಟಾ ಸನ್ಸ್ ನಲ್ಲಿ ಅತಿದೊಡ್ಡ ಪಾಲು ಹೊಂದಿರುವ ಟಾಟಾ ಟ್ರಸ್ಟ್ಸ್ ಇದಕ್ಕೆ ಸಮಾನ ಮೊತ್ತವನ್ನು ದೇಣಿಗೆ ರೂಪದಲ್ಲಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಈ ದುರಂತದಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 241 ಮಂದಿ ಪ್ರಯಾಣಿಕರು ಹಾಗೂ 19 ಮಂದಿ ವಿಮಾನ ಅಪ್ಪಳಿಸಿದ ವೈದ್ಯಕೀಯ ಹಾಸ್ಟೆಲ್ ಕಟ್ಟಡದಲ್ಲಿದ್ದವರು ಮೃತಪಟ್ಟಿದ್ದರು. ಮೃತರ ಕುಟುಂಬಗಳಿಗೆ ತಲಾ 1.25 ಕೋಟಿ ರೂಪಾಯಿ ಜಂಟಿ ಹಣಕಾಸು ನೆರವು ನೀಡುವುದಾಗಿ ಟಾಟಾ ಸನ್ಸ್ ಮತ್ತು ಏರ್ ಇಂಡಿಯಾ ಘೋಷಿಸಿದ್ದವು.
ಟಾಟಾ ಸನ್ಸ್ ಹೊರತಾಗಿ ಏರ್ ಇಂಡಿಯಾದಲ್ಲಿ ಸಿಂಗಾಪುರ ಏರ್ಲೈನ್ಸ್ ಶೇಕಡ 25ರಷ್ಟು ಮತ್ತು ಎಂಪ್ಲಾಯಿ ಟ್ರಸ್ಟ್ ಶೇಕಡ 1ರಷ್ಟು ಪಾಲು ಹೊಂದಿದೆ. ಟಾಟಾ ಸನ್ಸ್ ಆಡಳಿತ ಮಂಡಳಿ ಕಲ್ಯಾಣ ಟ್ರಸ್ಟ್ ಪ್ರಸ್ತಾವಕ್ಕೆ ಗುರುವಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಮುಂದಿನ ಹಂತದಲ್ಲಿ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ನೋಂದಣಿ ಮತ್ತು ಟ್ರಸ್ಟಿಗಳ ನೇಮಕ ಸೇರಿದಂತೆ ಕಾನೂನು ಪ್ರಕ್ರಿಯೆಗಳು ನಡೆಯಲಿವೆ. ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಎಐ171 ಟ್ರಸ್ಟ್ ನ ಮುಖ್ಯಸ್ಥರಾಗುವ ಸಾಧ್ಯತೆ ಇದೆ. ಇದರಲ್ಲಿ ಟಾಟಾ ಸಂಸ್ಥೆಗೆ ಹೊರತಾದ ವ್ಯಕ್ತಿಗಳನ್ನೂ ಸೇರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.







