16 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಏರ್ ಇಂಡಿಯಾ ಕಾರ್ಯಾಚರಣೆ ಕಡಿತ

ಸಾಂದರ್ಭಿಕ ಚಿತ್ರ (PTI)
ಮುಂಬೈ: ಜೂನ್ 21ರಿಂದ ಜುಲೈ 15ರವರೆಗೆ ಹದಿನಾರು ಅಂತರರಾಷ್ಟ್ರೀಯ ವಾಯುಮಾರ್ಗಗಳಲ್ಲಿ ವಿಮಾನ ಸಂಚಾರವನ್ನು ಕಡಿತಗೊಳಿಸುವುದಾಗಿ ಏರ್ ಇಂಡಿಯಾ ಪ್ರಕಟಿಸಿದೆ. ಜತೆಗೆ 3 ಸಾಗರೋತ್ತರ ನಗರಗಳಿಗೆ ಸೇವೆಯನ್ನು ರದ್ದುಪಡಿಸಲಾಗಿದೆ.
ಜೂನ್ 12ರ ಅಹ್ಮದಾಬಾದ್ ದುರಂತದ ಬಳಿಕ ಟಾಟಾ ಸಮೂಹ ಮಾಲೀಕತ್ವದ ಏರ್ ಇಂಡಿಯಾದ ಹಲವು ವಿಮಾನ ಸಂಚಾರ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ವೇಳಾಪಟ್ಟಿಯ ಸ್ಥಿರತೆಯನ್ನು ಪುನಃಸ್ಥಾಪಿಸುವ ಸಲುವಾಗಿ ಮತ್ತು ಕೊನೆಕ್ಷಣದಲ್ಲಿ ಪ್ರಯಾಣಿಕರಿಗೆ ಆಗುವ ಅನಾನುಕೂಲತೆಗಳನ್ನು ಕಡಿಮೆ ಮಾಡುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಏರ್ ಇಂಡಿಯಾದ ವಿಮಾನ ಶ್ರೇಣಿಯಲ್ಲಿ ಸೇರಿರುವ ವೈಡ್ ಬಾಡಿ ವಿಮಾನಗಳನ್ನು ತಾತ್ಕಾಲಿಕವಾಗಿ ಶೇಕಡ 15ರಷ್ಟು ಕಡಿಮೆ ಮಾಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬಗ್ಗೆ ವಿವರವಾದ ಪ್ರಕಟಣೆ ಹೊರಡಿಸಿದೆ.
ಜೂನ್ 21ರಿಂದ ಈ ನಿರ್ಬಂಧಗಳು ಜಾರಿಯಾಗಲಿದ್ದು, ಜಲೈ 15ರವರೆಗೆ ಇರುತ್ತವೆ. ದೆಹಲಿ- ನೈರೋಬಿ, ಅಮೃತಸರ- ಲಂಡನ್ ಮತ್ತು ಗೋವಾ-ಲಂಡನ್ ವಿಮಾನ ಮಾರ್ಗದಲ್ಲಿ ಸಂಚಾರ ಸದ್ಯಕ್ಕೆ ರದ್ದುಪಡಿಸಲಾಗುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ದೆಹಲಿ- ನೈರೋಬಿ ನಡುವೆ ವಾರಕ್ಕೆ ನಾಲ್ಕು ವಿಮಾನಗಳು, ಅಮೃತಸರ- ಲಂಡನ್ ಹಾಗೂ ಗೋವಾ-ಲಂಡನ್ ನಡುವೆ ತಲಾ ಮೂರು ವಿಮಾನಗಳು ಸಂಚರಿಸುತ್ತಿದ್ದವು.
ಜೊತೆಗೆ ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಪೌರಾತ್ಯ ದೇಶಗಳ ನಗರಗಳನ್ನು ಸಂಪರ್ಕಿಸುವ 16 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಚಾರ ಕಡಿತಗೊಳಿಸಲಾಗಿದೆ. ಇದರಲ್ಲಿ ದೆಹಲಿ-ಟೊರಾಂಟೊ, ದೆಹಲಿ-ವ್ಯಾಂಕೋವರ್, ದೆಹಲಿ-ಸ್ಯಾನ್ಫ್ರಾನ್ಸಿಸ್ಕೊ, ದೆಹಲಿ- ಚಿಕಾಗೊ ಹಾಗೂ ದೆಹಲಿ- ವಾಷಿಂಗ್ಟನ್ ಮಾರ್ಗಗಳು ಸೇರಿವೆ.







