ಮಹಿಳೆ, ಮಕ್ಕಳ ಸುರಕ್ಷತೆಗೆ ಇದೀಗ ಅಕ್ಕ ಪಡೆ ಸಾರಥ್ಯ

ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗೃಹ ಇಲಾಖೆಯ ಸಹಯೋಗದೊಂದಿಗೆ ಅಕ್ಕ ಪಡೆ ಯೋಜನೆ ರಾಜ್ಯಾದ್ಯಂತ ಜಾರಿಗೆ ತಂದಿದೆ.
ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನವ ಕಳ್ಳ ಸಾಗಣೆ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ಪೊಕ್ಸೊ ಸೇರಿ ಇತರ ಕೃತ್ಯ ತಡೆಯಲು ಸಂರಕ್ಷಣೆ ಅಕ್ಕಪಡೆ ಶ್ರಮಿಸಲಿದೆ. ಅವರ ಮೇಲೆ ಮಾನಸಿಕ, ದೈಹಿಕವಾಗಿ ಮತ್ತು ಸಾಮಾಜಿಕ ಹಿಂಸೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿದ ಸರ್ಕಾರ ಕಾನೂನು ಅರಿವು ಮೂಡಿಸಿ ಅವರ ಸಂರಕ್ಷಣೆ ಮಾಡುವಂತೆ ಅಕ್ಕಪಡೆಗೆ ನಿರ್ದೇಶನ ನೀಡಿದೆ.
ಜಿಲ್ಲಾ ಮತ್ತು ಕಮಿಷನರೇಟ್ ಮಟ್ಟದದಲ್ಲಿ ಅಕ್ಕ ಪಡೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಕಮಿಷನರ್ ಅಧ್ಯಕ್ಷರಾಗಿರುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಉಪಾಧ್ಯಾಕ್ಷರಾಗಿರುತ್ತಾರೆ. ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಹಾಗೂ ಮಹಿಳೆ ಪೊಲೀಸ್ ಇಲಾಖೆಯ ಉಪಾಧೀಕ್ಷಕರು ಸಮಿತಿಯ ಸದಸ್ಯರಾಗಿರುತ್ತಾರೆ.
ಅಕ್ಕ ಪಡೆ ರಚನೆ; ಅಕ್ಕಪಡೆ ತಂಡದಲ್ಲಿ ನಾಲ್ವರು ಸದೃಢವಾಗಿರುವ 35 ವರ್ಷದೊಳಗಿನ ಮಹಿಳಾ ಹೋಂಗಾರ್ಡ್‌ಗಳನ್ನು ನೇಮಿಸಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜ್ಯನಗಳ ಕುರಿತು ಸಂಪೂರ್ಣ ತರಬೇತಿ ನೀಡಲಾಗುತ್ತದೆ. ಗಸ್ತು ಸಂಚರಿಸಲು ಬೊಲೆರೊ ವಾಹನ, ಹೋಂಗಾರ್ಡ್ಗಳಿಗೆ ಕಮಾಂಡೋ ಸಮವಸ್ತ್ರವಿರುತ್ತದೆ.
ಕರ್ತವ್ಯದ ವಿವರ; ಪಾಳಿಯಲ್ಲಿ 2 ಹೋಂಗಾರ್ಡ್‌ಗಳು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ರವರೆಗೆ, ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೆ ಜಿಲ್ಲಾ ಮತ್ತು ತಾಲೂಕುಮಟ್ಟದಲ್ಲಿ ರಾತ್ರಿ 8 ರ ವರೆಗೆ ಎರಡನೇ ಪಾಳಿಯಲ್ಲಿ ಠಾಣೆಯ ಪಿಐ ಉಸ್ತುವಾರಿಯಲ್ಲಿ ಮಹಿಳಾ ಕಾನ್ಸಟೇಬಲ್ ಜೊತೆಗೆ ಗಸ್ತು ತಿರುಗುತ್ತಾರೆ.
ರಾಜ್ಯಾದ್ಯಂತ ಅಕ್ಕಮಹಾದೇವಿ ಹೆಸರಲ್ಲಿ ಪಡೆ ಜಾರಿಗೆ ತಂದಿದ್ದು ಸ್ವಾಗತಾರ್ಹ. ಅಕ್ಕ ಎಂಬುದು ನಿರ್ಭಯ ಮತ್ತು ನಿರ್ಭಯದ ಸಂಕೇತ. ಸಶಕ್ತರಿಗೆ ತರಬೇತಿ ನೀಡಿ ಅಕ್ಕಪಡೆ ಕಾರ್ಯಾಚರಣೆಗಿಳಿದಲ್ಲಿ ಮಾತ್ರ ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ಚೂರು ನಿಯಂತ್ರಣ ಸಾಧ್ಯ.
-ಮೀನಾಕ್ಷಿ ಬಾಳಿ, ಉಪಾಧ್ಯಕ್ಷೆ, ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆ
ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯ ತಡೆಯಲು ಸಾರ್ವಜನಿಕ ಸ್ಥಳಗಳಾದ ಶಾಪಿಂಗ್ ಮಾಲ್, ರೈಲ್ವೆ, ಬಸ್ ನಿಲ್ದಾಣ, ಮಾರ್ಕೆಟ್ ಸೇರಿ ಇತರ ಸ್ಥಳಗಳಲ್ಲಿ ಅಕ್ಕಪಡೆ ಕೆಲಸ ಮಾಡುತ್ತದೆ. ಅಹಿತಕರ ಘಟನೆ ಸಂಭವಿಸಿದಲ್ಲಿ ಕೂಡಲೇ ಜಿಲ್ಲಾ ಕಮಿಷನರೇಟ್ ವ್ಯಾಪ್ತಿಯ ನಿಯಂತ್ರಣ ಕೊಠಡಿಗೆ ಮಾಹಿತಿ ಬರುತ್ತದೆ. ಕಲಬುರಗಿಯಲ್ಲಿಯೂ ಅಕ್ಕಪಡೆ ನಿಯೋಜನೆಗೆ ಸಿದ್ಧತೆ ಕೈಗೊಳ್ಳುತ್ತಿದ್ದೇವೆ.
-ಶರಣಪ್ಪ ಎಸ್.ಡಿ, ನಗರ ಪೊಲೀಸ್ ಆಯುಕ್ತರು ಕಲಬುರಗಿ







