ಸಮುದ್ರದಲ್ಲಿ 30 ಕಿ.ಮೀ. ಈಜಿದ 14ರ ಹರೆಯದ ಡಿಂಪಲ್ ಸೋನಾಕ್ಷಿ
ಕೋಲಾರ: ಕೋಲಾರ ಜಿಲ್ಲೆಯ 14ರ ಹರೆಯದ ಬಾಲಕಿಯೊಬ್ಬಳು ಗುಜರಾತ್‌ನ ಸಮುದ್ರದಲ್ಲಿ ಬರೋಬ್ಬರಿ 30 ಕಿ.ಮೀ ಈಜಿ ದಾಖಲೆ ನಿರ್ಮಿಸಿದ್ದಾಳೆ.
ಶ್ರೀನಿವಾಸಪುರ ತಾಲೂಕಿನ ಕುಪ್ಪಹಳ್ಳಿ ಗ್ರಾಮದ ಡಿಂಪಲ್ ಸೋನಾಕ್ಷಿ ಎಂ.ಗೌಡ ಈ ಸಾಧನೆ ಮಾಡಿದ ಹುಡುಗಿ. ಈಕೆ ಶಿಕ್ಷಕ ಮತ್ತು ಕೋಚ್ ಮಂಜುನಾಥ್ ಹಾಗೂ ರೂಪಾ ದಂಪತಿ ಪುತ್ರಿ.
ಸೋನಾಕ್ಷಿ ಈಜು ಸ್ಪರ್ಧೆಯಲ್ಲಿ ಗುಜರಾತ್‌ನ ಅದ್ರಿ ಬೀಚ್‌ನಿಂದ ವೀರವಾಲ್ ಜೆಟ್ಟಿರವರೆಗೆ 30 ಕಿ.ಮೀ. ದೂರವನ್ನು 3 ಗಂಟೆ 33 ನಿಮಿಷ 25 ಸೆಕೆಂಡ್‌ಗಳಲ್ಲಿ ಈಜಿ ಮೊದಲ ಸ್ಥಾನ ಪಡೆದಿದ್ದಾಳೆ.
‘ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ 16 ಬಾಲಕಿಯರು ಸ್ಪರ್ಧಿಸಿದ್ದರು. ರಾಜ್ಯದಿಂದ ಸ್ಪರ್ಧಿಸಿದ್ದು ನಾನೊಬ್ಬಳೇ. ಸ್ಪರ್ಧಿಗಳಲ್ಲಿ ಎಲ್ಲರಿಗಿಂತ ನಾನೇ ಚಿಕ್ಕವಳು. 13 ನಿಮಿಷ ಬೇಗನೇ ತಲುಪಿ ಹಿಂದಿನ ದಾಖಲೆ ಮುರಿದಿದ್ದೇನೆ. ಮೊದಲ ಸ್ಥಾನ ಪಡೆದಿದ್ದು ತುಂಬಾ ಖುಷಿ ತಂದಿದೆ’ ಎಂದು ಸೋನಾಕ್ಷಿ ಪ್ರತಿಕ್ರಿಯಿಸಿದ್ದಾಳೆ.
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ನಿಹಾರ್ ಅಮೀನ್ ಅವರ ಡಾಲ್ಫಿನ್ ಅಕಾಡಮಿಯಲ್ಲಿ ಸೋನಾಕ್ಷಿ ಅಭ್ಯಾಸ ನಡೆಸುತ್ತಿದ್ದು, 2024ರ ನವೆಂಬರ್‌ನಲ್ಲಿ ಗುಂಜೂರು ಕೆರೆಯಲ್ಲಿ ನಡೆದ ರಾಷ್ಟ್ರಮಟ್ಟದ 10 ಕಿ.ಮೀ. ಈಜು ಓಪನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಹಾಂಕಾಂಗ್‌ನಲ್ಲಿ ನಡೆದ ಏಷ್ಯನ್ ಓಪನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಳು. ಮಹಾರಾಷ್ಟ್ರದ ವಿಜಯದುರ್ಗದ ಬಳಿ ಸಮುದ್ರದಲ್ಲಿ ನಡೆದ 15 ಕಿ.ಮೀ ಓಪನ್ ಈಜು ಸ್ಪರ್ಧೆ, ಮಾಲ್ವನ್ ಬೀಚ್‌ನಲ್ಲಿ ನಡೆದ 4 ಕಿ.ಮೀ ಮತ್ತು 10 ಕಿ.ಮೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಗುಜರಾತ್‌ನ ಪೋರಬಂದರ್‌ನಲ್ಲಿ ನಡೆದ 5 ಕಿ.ಮೀ ಮತ್ತು 10 ಕಿ.ಮೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈಜಿಗಾಗಿ ಬೆಂಗಳೂರಿನಲ್ಲಿ ಮನೆ
ಡಿಂಪಲ್ ಊರು ಶ್ರೀನಿವಾಸಪುರ ತಾಲೂಕಿನ ಕುಪ್ಪಳ್ಳಿ. ಆದರೆ, ಮಗಳ ಈಜು ಪ್ರತಿಭೆ ಗುರುತಿಸಿದ ತಂದೆ ಮಂಜುನಾಥ್, ಬೆಂಗಳೂರಿನಲ್ಲಿದ್ದರೆ ಮತ್ತಷ್ಟು ಸಾಧನೆ ಮಾಡಬಹುದು ಎಂಬುದನ್ನು ಅರಿತರು. ಹೀಗಾಗಿ, ಬೆಂಗಳೂರಿನಲ್ಲೇ ಬಾಡಿಗೆ ಮನೆ ಮಾಡಿ ಓದಿನ ಜೊತೆಗೆ ಈಜು ತರಬೇತಿಗೆ ಸೇರಿಸಿದ್ದಾರೆ. ಮೂರನೇ ತರಗತಿಯಿಂದ ಡಾಲ್ಫಿನ್ ಅಕ್ವೆಟಿಕ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಸದ್ಯ ಬೆಂಗಳೂರಿನ ವಿದ್ಯಾನಗರ ಕ್ರಾಸ್‌ನ ಶ್ರೀವೆಂಕಟೇಶ್ವರ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದು, ಓದುವುದರಲ್ಲೂ ಮುಂದಿದ್ದಾಳೆ.
ಮಗಳು ಮೂರನೇ ವಯಸ್ಸಿಗೆ ಈಜು ಕಲಿತಳು. ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸದ ಕಾರಣ ಯಶಸ್ಸು ಸಿಕ್ಕಿದೆ. ದೂರದ ಅಂತರದ ಈಜು ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಮಗ ಚಿರಾಯು ಕೂಡ ಈಜು ಕಲಿಯುತ್ತಿದ್ದಾನೆ.
-ಮಂಜುನಾಥ್, ಡಿಂಪಲ್ ಸೋನಾಕ್ಷಿಯ ತಂದೆ