ಚಿನ್ನದ ಬೆಲೆಯಲ್ಲಿ ಸತತ ಏರಿಕೆ; ಇಂದಿನ ದರವೆಷ್ಟು?
ಚಿನ್ನ ಖರೀದಿಯಲ್ಲಿ ಎರಡನೇ ಸ್ಥಾನದಲ್ಲಿ ಭಾರತ; ಭಾರತೀಯರ ಬಳಿ ಎಷ್ಟು ಚಿನ್ನವಿದೆ ಗೊತ್ತೇ?
ಸಾಂದರ್ಭಿಕ ಚಿತ್ರ (AI)
ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರ! ಜಾಗತಿಕ ಬೇಡಿಕೆಯ ಸುಮಾರು ಶೇ. 26 ರಷ್ಟನ್ನು ಭಾರತವೇ ಖರೀದಿಸುತ್ತಿದೆ. ಚೀನಾ ಶೇ. 28 ರಷ್ಟನ್ನು ಖರೀದಿಸುತ್ತಿದ್ದು, ಮೊದಲ ಸ್ಥಾನದಲ್ಲಿದೆ.
ಹೊಸ ವರ್ಷದಿಂದ ಸತತವಾಗಿ ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆ, ಯುದ್ಧ ಮತ್ತು ಸಂಘರ್ಷಗಳು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಈ ಬೆಳವಣಿಗೆಗಳು ಚಿನ್ನದ ದರದ ಮೇಲೂ ಪ್ರತಿಫಲಿಸುತ್ತಿದೆ. ಹೀಗಾಗಿ ಜನವರಿ 6ರಂದು ಮಂಗಳವಾರವೂ ಹತ್ತು ಗ್ರಾಂ ಚಿನ್ನದ ಬೆಲೆ 600 ರೂ. ಹೆಚ್ಚಾಗಿದೆ.
ವೆನೆಜುವೆಲಾ ಅಧ್ಯಕ್ಷರನ್ನು ಅಮೆರಿಕ ಬಂಧಿಸಿರುವ ಭೌಗೋಳಿಕ ರಾಜಕೀಯದ ಅನಿಶ್ಚಿತತೆ ಮತ್ತು ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದ ನಡುವಿನ ಸಂಘರ್ಷದಿಂದಾಗಿ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ವಿವಿಧ ಲೋಹಗಲ ಬೆಲೆಯಲ್ಲಿ ದಿಢೀರ್ ಏರಿಕೆಗೆ ಕಾರಣವಾಗಿದೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಮಂಗಳವಾರ ಜನವರಿ 6 ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,882 (+60)ರೂ.ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,725 (+55) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,412 (+45) ರೂ. ಬೆಲೆಗೆ ತಲುಪಿದೆ.
ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜನವರಿ 6ರಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಜೊತೆಗೆ ಬೆಳ್ಳಿಯ ಬೆಲೆಯೂ ಏರುತ್ತಿದೆ. 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 13,882 ರೂ.ಆಗಿದೆ. ಸೋಮವಾರಕ್ಕೆ ಹೋಲಿಸಿದರೆ ಇಂದು 60 ರೂ. ಹೆಚ್ಚಳವಾಗಿದೆ. 22 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಸಹ ಹೆಚ್ಚಳವಾಗಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ಜನವರಿ 6ರಂದು ಒಂದು ಗ್ರಾಂಗೆ 12,725 ರೂ. ಆಗಿದೆ. ಸೋಮವಾರಕ್ಕೆ ಹೋಲಿಸಿದರೆ 55 ರೂ. ಏರಿಕೆಯಾಗಿದೆ. 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 10,412 ರೂ. ಆಗಿದೆ. ಸೋಮವಾರಕ್ಕೆ ಹೋಲಿಸಿದರೆ ಒಂದು ಗ್ರಾಂ ಮೇಲೆ 45 ರೂ. ಹೆಚ್ಚಳವಾಗಿದೆ.
ಬೆಳ್ಳಿಯ ಬೆಲೆಯಲ್ಲೂ ಏರಿಕೆ
ಆರ್ಥಿಕ ಅನಿಶ್ಚಿತತೆಯಿಂದಾಗಿ ಬೆಳ್ಳಿಯ ಬೆಲೆಯಲ್ಲೂ ಏರಿಕೆಯಾಗುತ್ತಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 253 ರೂ. ಆಗಿದ್ದು, ಒಂದು ಗ್ರಾಂ ಬೆಳ್ಳಿ ಬೆಲೆಯು 5 ರೂ. ಹೆಚ್ಚಳವಾಗಿದೆ. ಒಂದು ಕೆಜಿ ಬೆಳ್ಳಿಯ ಬೆಲೆಯು 2,53,000 ರೂ. ಆಗಿದ್ದು, ಸೋಮವಾರಕ್ಕೆ ಹೋಲಿಸಿದರೆ ಒಂದು ಕೆಜಿ ಬೆಳ್ಳಿ ಬೆಲೆಯ ಮೇಲೆ 5,000 ಸಾವಿರ ರೂ. ಏರಿದೆ.
ಚಿನ್ನ ಖರೀದಿಸುವವರಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ
ಜಗತ್ತಿನಲ್ಲಿ ಚಿನ್ನ ಖರೀದಿಸುವವರಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರ. ಜಾಗತಿಕ ಬೇಡಿಕೆಯ ಸುಮಾರು ಶೇ. 26 ರಷ್ಟನ್ನು ಭಾರತವೇ ಖರೀದಿಸುತ್ತಿದೆ. ಚೀನಾ ಶೇ. 28 ರಷ್ಟನ್ನು ಖರೀದಿಸುತ್ತಿದ್ದು, ಮೊದಲ ಸ್ಥಾನದಲ್ಲಿದೆ.
ಭಾರತ ಕಳೆದ ಐದು ವರ್ಷಗಳಲ್ಲಿ ಬಾರ್‌ಗಳು ಮತ್ತು ನಾಣ್ಯಗಳ ಮೂಲಕ ಚಿನ್ನದ ಹೂಡಿಕೆ ಮಾಡುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೂಡ ಚಿನ್ನದ ಸಂಗ್ರಹ ಹೆಚ್ಚಿಸಿದೆ. 2024ರಿಂದ ಆರ್‌ಬಿಐ ಸುಮಾರು 75 ಟನ್‌ಗಳಷ್ಟು ಚಿನ್ನವನ್ನು ಖರೀದಿಸಿದೆ. ಆರ್‌ಬಿಐ ಬಳಿ ಈಗ ಒಟ್ಟು 880 ಟನ್ ಚಿನ್ನ ಇದೆ. ಇದು ದೇಶದ ವಿದೇಶಿ ವಿನಿಮಯ ಸಂಗ್ರಹದ ಶೇ. 14 ರಷ್ಟಿದೆ. ಭಾರತೀಯರು ಖಾಸಗಿಯಾಗಿ ಹೊಂದಿರುವ ಚಿನ್ನದ ಮೌಲ್ಯವು ಅಸಾಧಾರಣ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ಪ್ರಮುಖ ಹಣಕಾಸು ವಿಶ್ಲೇಷಕ ಸಂಸ್ಥೆ ಮಾರ್ಗನ್ ಸ್ಟಾನ್ಲಿ ತಿಳಿಸಿದೆ.
ಭಾರತೀಯರ ಬಳಿ ಎಷ್ಟು ಚಿನ್ನವಿದೆ?
ಭಾರತೀಯ ಕುಟುಂಬಗಳು ಒಟ್ಟಾರೆಯಾಗಿ ಸುಮಾರು 34,600 ಟನ್ ಚಿನ್ನವನ್ನು ಹೊಂದಿವೆ! ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಬೆಲೆ 4,550 ಡಾಲರ್‌ನಷ್ಟಿದೆ. ಈ ಮೀಸಲುಗಳ ಒಟ್ಟು ಮೌಲ್ಯ ಅಂದಾಜು 5 ಟ್ರಿಲಿಯನ್ ಡಾಲರ್‌ನಷ್ಟಿದೆ. ಅಂದರೆ 4.5 ಲಕ್ಷ ಕೋಟಿ ರೂ! ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಅಂದಾಜಿನ ಪ್ರಕಾರ, ಭಾರತದ ಪ್ರಸ್ತುತ ಜಿಡಿಪಿ ಸುಮಾರು 4.1 ಟ್ರಿಲಿಯನ್ ಆಗಿದೆ. ಅಂದರೆ, ಭಾರತೀಯ ಕುಟುಂಬಗಳಲ್ಲಿನ ಚಿನ್ನದ ಮೌಲ್ಯವು ದೇಶವು ಒಂದು ವರ್ಷದಲ್ಲಿ ತೆಗೆಯುವ ಆದಾಯಕ್ಕಿಂತ ಹೆಚ್ಚಿದೆ.