×
Ad

ಭಾರತ ಗಡಿಯೊಳಗೆ ನುಸುಳಲು ಯತ್ನಿಸಿದ 11 ಬಾಂಗ್ಲಾ ಪ್ರಜೆಗಳ ಬಂಧನ

Update: 2024-08-11 22:15 IST

                                                                ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಪಶ್ಚಿಮ ಬಂಗಾಳ, ತ್ರಿಪುರಾ ಹಾಗೂ ಮೇಘಾಲಯ ರಾಜ್ಯಗಳಲ್ಲಿನ ಅಂತಾರಾಷ್ಟ್ರೀಯ ಗಡಿ ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ 11 ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿದೆಯೆಂದು ಗಡಿಭದ್ರತಾಪಡೆ (ಬಿಎಸ್‌ಎಫ್) ರವಿವಾರ ತಿಳಿಸಿದೆ.

ತಲಾ ಇಬ್ಬರನ್ನು ಪಶ್ಚಿಮಬಂಗಾಳ, ತ್ರಿಪುರಾ ಗಡಿಗಳಿಂದ ಹಾಗೂ ಉಳಿದ ಏಳು ಮಂದಿಯನ್ನು ಮೇಘಾಲಯ ಗಡಿಯಲ್ಲಿ ಬಂಧಿಸಲಾಗಿದೆ. ಅವರನ್ನು ಪ್ರಶ್ನಿಸಲಾಗುತ್ತಿದ್ದು, ಆನಂತರ ಮುಂದಿನ ಕಾನೂನುಕ್ರಮಕ್ಕಾಗಿ ಆಯಾ ರಾಜ್ಯಗಳ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಬಿ ಎಸ್‌ ಎಫ್‌ ನ ವಕ್ತಾರರು ತಿಳಿಸಿದ್ದಾರೆ.

ಭಾರತೀಯ ಪ್ರಜೆಗಳು ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಜನರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಗಡಿಭದ್ರತಾಪಡೆಯು ತನ್ನ ಸಹವರ್ತಿಯಾದ ಬಾಂಗ್ಲಾದೇಶ ಗಡಿ ಕಾವಲು ಪಡೆಯ ಜೊತೆ ನಿಯಮಿತವಾಗಿ ಸಂಪರ್ಕದಲ್ಲಿದೆಯೆಂದು ಅವರು ತಿಳಿಸಿದರು.

ಶೇಕ್ ಹಸೀನಾ ಸರಕಾರದ ಪತನದ ಆನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸುರಕ್ಷತೆ ಹಾಗೂ ಭದ್ರತೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಕಳೆದ ವಾರ ಬಿ ಎಸ್‌ ಎಫ್‌ ನ ಹೆಚ್ಚುವರಿ ಮಹಾನಿರ್ದೇಶಕರ ನೇತೃತ್ವದಡಿ ಸಮಿತಿಯೊಂದನ್ನು ರಚಿಸಿತ್ತು.

ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯದಿನಾಚರಣೆಯ ಹಾಗೂ ಬಾಂಗ್ಲಾದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಹಾಗೂ ಹಿನ್ನೆಲೆಯಲ್ಲಿ ಗಡಿಯಲ್ಲಿ ಭದ್ರತಾ ಪರಿಸ್ಥಿತಿಯ ಪರಾಮರ್ಶೆಗಾಗಿ ಬಿಎಸ್‌ಎಫ್‌ನ ಪೂರ್ವ ಕಮಾಂಡ್ ಹೆಚ್ಚುವರಿ ಮಹಾನಿರ್ದೇಶಕ ರವಿ ಗಾಂಧಿ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಣಾ ಸಭೆ ನಡೆಯಿತು.

ಗಡಿ ನಿಯಂತ್ರಣ, ಭದ್ರತೆ ಹಾಗೂ ನಿರ್ವಹಣೆಗೆ ಸಂಬಂಂಧಿಸಿದಂತೆ ಸಭೆಯಲ್ಲಿ ವಿಸ್ತೃತವಾದ ಸಮಾಲೋಚನೆಗಳನ್ನು ನಡೆಸಲಾಯಿತೆಂದು ಬಿ ಎಸ್‌ ಎಫ್‌ ನ ಪೂರ್ವ ಕಮಾಂಡ್‌ನ ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News