×
Ad

ನ್ಯಾಯಾಂಗದಲ್ಲಿ ಕೃತಕ ಬುದ್ಧಿ ಮತ್ತೆ ಬಳಕೆಗೆ ನಿಯಂತ್ರಣ ಕೋರಿದ ಅರ್ಜಿ ಸುಪ್ರೀಂ ಕೋರ್ಟ್‌ ನಿಂದ ತಿರಸ್ಕೃತ

Update: 2025-12-05 21:31 IST

ಸುಪ್ರೀಂ ಕೋರ್ಟ್‌ (PTI) ,  ಎಐ (freepik.com)

ಹೊಸದಿಲ್ಲಿ, ಡಿ. 5: ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿ ಮತ್ತೆ (ಎಐ)ಯನ್ನು ‘ಅನಿಯಂತ್ರಿತ’ ಬಳಕೆ ನಿಯಂತ್ರಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ನ್ಯಾಯಾಂಗದಲ್ಲಿ ಕೃತಕ ಬುದ್ಧಿ ಮತ್ತೆ (ಎಐ) ಹಾಗೂ ಮೆಷಿನ್ ಲರ್ನಿಂಗ್ (ಎಂಎಲ್) ಸಾಧನಗಳ ದುಷ್ಪರಿಣಾಮಗಳ ಕುರಿತು ತನಗೆ ತಿಳಿದಿದೆ. ಆದರೆ, ಈ ಸಮಸ್ಯೆಗಳನ್ನು ನ್ಯಾಯಾಲಯಗಳ ಆದೇಶಗಳ ಮೂಲಕ ಪರಿಹರಿಸುವ ಬದಲು ಆಡಳಿತದ ಮೂಲಕ ಸಮರ್ಪಕವಾಗಿ ಪರಿಹರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೃತಕ ಬುದ್ಧಿ ಮತ್ತೆಯಿಂದ ಉತ್ಪಾದಿತ ವಿಷಯದಿಂದ ಉಂಟಾಗುವ ಅಪಾಯಗಳು ಹಾಗೂ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಅದರ ದುರುಪಯೋಗದ ವಿರುದ್ಧ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ ದೂರುದಾರ ಕಾರ್ತಿಕೇಯ ರಾವಲ್ ಅವರ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಅನುಪಮ್ ಲಾಲ್ ದಾಸ್ ಅವರ ವಾದವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯಮಾಲ್ಯ ಭಾಗಚಿ ಅವರ ಪೀಠ ಆಲಿಸಿತು.

ಕಾನೂನಿನಲ್ಲಿ ಅನಿರ್ಬಂಧಿತ ಕೃತಕ ಬುದ್ಧಿ ಮತ್ತೆಯ ಬಳಕೆಯ ವಿರುದ್ಧ ಐಐಟಿ ಮದ್ರಾಸ್‌ನ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಈ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ಅವರು ‘ಲೀಗಲ್ ಸೇಫ್ಟಿ ಸ್ಕೋರ್’ ಎಂಬ ಕಲ್ಪನೆಯನ್ನು ಮುಂದಿರಿಸಿದ್ದಾರೆ.

ಕೃತಕ ಬುದ್ಧಿ ಮತ್ತೆಯ ಪರಿಕರಗಳು ಅಸ್ತಿತ್ವದಲ್ಲಿಲ್ಲದ ತೀರ್ಪುಗಳು ಮತ್ತು ಪೂರ್ವನಿದರ್ಶನಗಳನ್ನು ಸೃಷ್ಟಿಸುತ್ತವೆ. ಈ ನಕಲಿ ತೀರ್ಪಗಳು ಕೆಲವೊಮ್ಮೆ ನಿಜವಾದ ನ್ಯಾಯಾಲಯದ ತೀರ್ಪುಗಳಲ್ಲಿ ಸೇರ್ಪಡೆಯಾಗಬಹುದು ಎಂದು ಹಿರಿಯ ವಕೀಲರು ಹೇಳಿದರು.

ನಮ್ಮ ನ್ಯಾಯಾಂಗ ನಿರ್ಧಾರಗಳನ್ನು ನಿಯಂತ್ರಿಸಲು ಅಥವಾ ಪರಿಣಾಮ ಬೀರಲು ನಾವು ಬಯಸುವುದಿಲ್ಲವಾದುದರಿಂದ ನಾವು ಅದನ್ನು ಬಹಳ ಎಚ್ಚರಿಕೆಯಿಂದ ಬಳಸುತ್ತೇವೆ. ಕೃತಕ ಬುದ್ದಿ ಮತ್ತೆ ನ್ಯಾಯಾಂಗ ಕಾರ್ಯಗಳಿಗೆ ಸಹಾಯ ಮಾಡಬಹುದು. ಆದರೆ, ಅದು ನ್ಯಾಯಾಂಗ ತಾರ್ಕಿಕತೆಯ ಸ್ಥಾನ ತುಂಬಲು ಅಥವಾ ಪ್ರಭಾವಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News