×
Ad

ಭೋಪಾಲ್ | ಬಿಯರ್ ಬಾಟಲಿಯಿಂದ ಇರಿದು ಪತಿಯನ್ನು ಹತ್ಯೆ ಮಾಡಿದ 17ರ ಯುವತಿ!

Update: 2025-04-18 07:54 IST

ಭೋಪಾಲ್ : ಒಡೆದ ಬಿಯರ್ ಬಾಟಲಿಯಿಂದ ಇರಿದು ಪತಿಯನ್ನು ಹತ್ಯೆ ಮಾಡಿದ 17 ವರ್ಷದ ಯುವತಿಯೊಬ್ಬಳು ವಿಡಿಯೊ ಕರೆ ಮಾಡಿ ತನ್ನ ಕೃತ್ಯವನ್ನು ಪ್ರಿಯಕರನಿಗೆ ಪ್ರದರ್ಶಿಸಿದ ಭಯಾನಕ ಘಟನೆ ಮಧ್ಯಪ್ರದೇಶದ ಬುರ್ಹಾನ್‍ಪುರದಲ್ಲಿ ಬೆಳಕಿಗೆ ಬಂದಿದೆ.

ಗೋಲ್ಡನ್ ಪಾಂಡೆ ಅಲಿಯಾಸ್ ರಾಹುಲ್ (25) ಎಂಬ ವ್ಯಕ್ತಿಯನ್ನು ಇಂಧೋರ್-ಇಚಾಪುರ ಹೆದ್ದಾರಿಯ ಐಟಿಐ ಕಾಲೇಜು ಬಳಿ 36 ಬಾರಿ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಎಲ್ಲ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಹದಿಹರೆಯದ ಯುವತಿ, ಆಕೆಯ ಪ್ರಿಯಕರ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ.

ನಾಲ್ಕು ತಿಂಗಳ ಹಿಂದೆ ಈ ಜೋಡಿ ವಿವಾಹವಾಗಿದ್ದು, ಶಾಪಿಂಗ್ ಮತ್ತು ಊಟ ಮುಗಿಸಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಬುರ್ಹಾನ್‍ಪಿರ ಎಸ್ಪಿ ದೇವೇಂದ್ರ ಪಾಟೀದಾರ್ ಹೇಳಿದ್ದಾರೆ.

"ಈ ಜೋಡಿ ವಾಪಸ್ಸಾಗುತ್ತಿದ್ದಾಗ ಪತ್ನಿ ತನ್ನ ಚಪ್ಪಲಿ ಮರೆತು ಬಂದಿದ್ದಾಗಿ ನಂಬಿಸಿ ಬೈಕ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾಳೆ. ರಾಹುಲ್ ಬೈಕ್ ನಿಲ್ಲಿಸಿದಾಗ ಪ್ರಿಯಕರ ಯುವರಾಜ್ ಎಂಬಾತರ ಇಬ್ಬರು ಸ್ನೇಹಿತರು ಸುತ್ತುವರಿದಿದ್ದಾರೆ. ಆರೋಪಿಗಳು ರಾಹುಲ್‍ನನ್ನು ಎಳೆದುಹಾಕಿ ತುಂಡಾದ ಬಿಯರ್ ಬಾಟಲಿಯಿಂದ 36 ಬಾರಿ ಇರಿದಿದ್ದಾರೆ. ರಾಹುಲ್ ಸ್ಥಳದಲ್ಲೇ ಮೃತಪಟ್ಟ" ಎಂದು ಪಾಟಿದಾರ್ ವಿವರಿಸಿದ್ದಾರೆ.

ಯುವತಿ ವಿಡಿಯೊ ಕರೆ ಮಾಡಿ ಮೃತದೇಹವನ್ನು ಯುವರಾಜ್‍ಗೆ ತೋರಿಸಿದ್ದಾಳೆ. ಪಕ್ಕದ ಹೊಲಕ್ಕೆ ಮೃತದೇಹವನ್ನು ಎಸೆದು ಎಲ್ಲರೂ ಪರಾರಿಯಾಗಿದ್ದಾರೆ. ಎ.13ರಂದು ಹೊಲದಲ್ಲಿ ಮೃತದೇಹ ಪತ್ತೆಯಾಗಿದ್ದು, ರಾಹುಲ್ ಕುಟುಂಬದವರು ಗುರುತು ಪತ್ತೆ ಮಾಡಿದ್ದಾರೆ. ಕೊನೆಯ ಬಾರಿ ಆತನನ್ನು ಪತ್ನಿಯ ಜತೆ ಕುಟುಂಬದವರು ನೋಡಿದ್ದು, ಇಬ್ಬರೂ ಹೊರಹೋಗಿದ್ದರು ಎಂಬ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News