×
Ad

5 ಲಕ್ಷ ರೂ. ಸಾಲದ ವಿಚಾರದಲ್ಲಿ ಜಗಳ: ಪರಸ್ಪರ ಚುಚ್ಚಿಕೊಂಡು ಮೃತಪಟ್ಟ ʼಸ್ನೇಹಿತರುʼ!

Update: 2025-07-15 15:04 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಸಾಲದ ಹೆಸರಿನಲ್ಲಿ ಗೆಳೆಯರಿಬ್ಬರು ಪರಸ್ಪರ ಚೂಪಾದ ಆಯುಧದಿಂದ ದಾಳಿ ನಡೆಸಿ ಇಬ್ಬರೂ ಮೃತಪಟ್ಟಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಸಂದೀಪ್‌ ಮತ್ತು ಆರಿಫ್‌ ಎಂದು ಗುರುತಿಸಲಾಗಿದ್ದು, ಇಬ್ಬರ ನಡುವೆಯೂ ಹಲವು ವರ್ಷಗಳ ಗೆಳೆತನವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ರಾತ್ರಿ ದಿಲ್ಲಿಯ ಖ್ಯಾಲಾ ಪ್ರದೇಶದ ಉದ್ಯಾನವನದಲ್ಲಿ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದ್ದು, ಪರಸ್ಪರ ಕೊಲೆಯಲ್ಲಿ ಕೊನೆಗೊಂಡಿದೆ.

“ಇಬ್ಬರಿಗೂ ಹತ್ತು ವರ್ಷಗಳ ಗೆಳೆತನವಿದ್ದು, ವರ್ಷದ ಹಿಂದೆ ಪ್ರಕರಣಕ್ಕೆ ಸಂಬಂಧಿಸಿ ಆರಿಫ್‌ ಬಂಧಿತನಾಗಿದ್ದಾಗ, ಸಂದೀಪ್‌ ದುಡ್ಡು ಕಟ್ಟಿ ಜಾಮೀನು ಒದಗಿಸಿದ್ದ. ಅಲ್ಲದೆ, ಆರಿಫ್‌ ನ ಪರವಾಗಿ ಫ್ಲ್ಯಾಟ್‌ ಒಂದಕ್ಕೂ ಸಂದೀಪ್‌ ದುಡ್ಡು ನೀಡಿದ್ದ, ಈ ದುಡ್ಡನ್ನು ವಾಪಾಸ್‌ ಕೇಳಿದ್ದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ” ಎಂದು ಸಂದೀಪ್‌ ನ ಸಹೋದರ ಕುಲದೀಪ್‌ ಯಾದವ್ ತಿಳಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ದೀನ್ ದಯಾಳ್ ಉಪಾಧ್ಯಾಯ (ಡಿಡಿಯು) ಆಸ್ಪತ್ರೆಗೆ ದಾಖಲಿಸಿದ್ದು, ಸೋಮವಾರ ಮುಂಜಾನೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಿಲಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News