ಪಿಎಂ-ಶ್ರೀ ಯೋಜನೆ ಜಾರಿಗೊಳಿಸಲು ನಿರಾಕರಿಸಿದ 3 ವಿಪಕ್ಷ ಆಡಳಿತ ರಾಜ್ಯಗಳು: ಸರ್ವ ಶಿಕ್ಷಾ ಅಭಿಯಾನ ಅನುದಾನ ಸ್ಥಗಿತಗೊಳಿಸಿದ ಕೇಂದ್ರ ಸರಕಾರ
ಸಾಂದರ್ಭಿಕ ಚಿತ್ರ (Meta ai)
ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವಾಲಯವು ಸಮಗ್ರ ಶಿಕ್ಷಾ ಅಭಿಯಾನದಡಿಯಲ್ಲಿ ದಿಲ್ಲಿ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಅನುದಾನ ನೀಡುವುದನ್ನು ಸ್ಥಗಿತಗೊಳಿಸಿದೆ. ಈ ಮೂರು ರಾಜ್ಯಗಳು ಪ್ರಧಾನ್ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (ಪಿಎಂ-ಶ್ರೀ) ಯೋಜನೆಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ ಕಾರಣ ಅನುದಾನ ತಡೆಹಿಡಿಯಲಾಗಿದೆ ಎಂದು indianexpress.com ವರದಿ ಮಾಡಿದೆ.
ಮುಂದಿನ ಐದು ವರ್ಷಗಳ ಕಾಲ ರೂ. 27000 ಕೋಟಿ ಬಜೆಟ್ ಹೊಂದಿರುವ ಪಿಎಂ ಶ್ರೀ ಯೋಜನೆಯಡಿ ಕೇಂದ್ರ ಸರ್ಕಾರವು ಸರ್ಕಾರಿ ಶಾಲೆಗಳನ್ನು ಅತ್ಯುತ್ತಮ ಸಂಸ್ಥೆಗಳಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರೂಪಿಸಲು ಚಿಂತನೆ ನಡೆಸಿದ್ದು ದೇಶದ ಕನಿಷ್ಠ 14,500 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯ ಶೇ 60 ವೆಚ್ಚ ಕೇಂದ್ರ ಭರಿಸಲಿದ್ದರೆ ಉಳಿದ ಶೇ 40 ವೆಚ್ಚವನ್ನು ರಾಜ್ಯ ಸರ್ಕಾರಗಳು ಭರಿಸಲಿವೆ. ರಾಜ್ಯಗಳು ಶಿಕ್ಷಣ ಸಚಿವಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ ಯೋಜನೆಯಲ್ಲಿ ಭಾಗವಹಿಸುವಿಕೆಯನ್ನು ದೃಢಪಡಿಸಬೇಕಿದೆ.
ಆದರೆ ತಮಿಳುನಾಡು, ಕೇರಳ, ದಿಲ್ಲಿ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ, ತಮಿಳುನಾಡು ಮತ್ತು ಕೇರಳ ಯೋಜನೆಯಲ್ಲಿ ಭಾಗವಹಿಸುವಿಕೆಗೆ ಆಸಕ್ತಿ ತೋರಿಸಿವೆಯಾದರೂ ದಿಲ್ಲಿ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ನಿರಾಕರಿಸಿವೆ. ಈ ಹಿನ್ನೆಲೆಯಲ್ಲಿ ಈ ಮೂರು ರಾಜ್ಯಗಳ ಸರ್ವ ಶಿಕ್ಷಾ ಅಭಿಯಾನ ನಿಧಿಯನ್ನು ನಿಲ್ಲಿಸಲಾಗಿದೆ.
ಕಳೆದ ವಿತ್ತ ವರ್ಷದ ಮೂರನೇ ಮತ್ತು ನಾಲ್ಕನೇ ಕಂತಿನ ಸರ್ವ ಶಿಕ್ಷಾ ಅಭಿಯಾನ ನಿಧಿಯನ್ನು ಈ ರಾಜ್ಯಗಳು ಪಡೆದಿಲ್ಲ ಹಾಗೂ ಈ ವರ್ಷದ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲೂ ನಿಧಿ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಬಾಕಿ ಅನುದಾನ ಬಿಡುಗಡೆ ಕೋರಿ ಈ ರಾಜ್ಯಗಳು ಹಲವಾರು ಪತ್ರಗಳು ಮತ್ತು ಜ್ಞಾಪನೆಗಳನ್ನು ಕೇಂದ್ರಕ್ಕೆ ಕಳುಹಿಸಿವೆ.
ದಿಲ್ಲಿಗೆ ರೂ 330 ಕೋಟಿ, ಪಂಜಾಬ್‌ಗೆ ರೂ 515 ಕೋಟಿ ಮತ್ತು ಪ ಬಂಗಾಳಕ್ಕೆ ರೂ 1000 ಕೋಟಿ ಅನುದಾನ ಮೂರು ತ್ರೈಮಾಸಿಕ ಅವಧಿಗೆ ಬಾಕಿಯಿದೆ.
ರಾಜ್ಯಗಳು ಪಿಎಂ ಶ್ರೀ ಯೋಜನೆ ಜಾರಿಗೊಳಿಸದೆ ಸರ್ವ ಶಿಕ್ಷಾ ಅಭಿಯಾನದಡಿ ಅನುದಾನ ಪಡಯಲಾಗದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಆಪ್ ಆಡಳಿತವಿದ್ದು ಪಿಎಂ ಶ್ರೀ ಯೋಜನೆಯಂತಹುದೇ ಸ್ಕೂಲ್ಸ್ ಆಫ್ ಎಮಿನೆನ್ಸ್ ಕಾರ್ಯಕ್ರಮ ಇಲ್ಲಿ ಜಾರಿಯಲ್ಲಿವೆ. ಪಿಎಂ ಶ್ರೀ ಯೋಜನೆಯ ಶೇ 40 ರಷ್ಟು ವೆಚ್ಚವನ್ನು ರಾಜ್ಯವೇ ಭರಿಸಬೇಕಿರುವುದರಿಂದ ತನ್ನ ಶಾಲೆಗಳಿಗೆ ಪಿಎಂ-ಶ್ರೀ ಹೆಸರು ಸೇರಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದೆ.
ಪಂಜಾಬ್ ಅಕ್ಟೋಬರ್ 2022ರಲ್ಲಿ ಯೋಜನೆ ಜಾರಿಗೆ ಒಪ್ಪಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ ನಂತರ ಹಿಂದೆ ಸರಿದಿತ್ತು.