ಒಡಿಶಾ: ಮದರಸದಲ್ಲಿ 12 ವರ್ಷದ ಬಾಲಕನ ಕೊಲೆ, ಐದು ವಿದ್ಯಾರ್ಥಿಗಳ ಬಂಧನ
ಸಾಂದರ್ಭಿಕ ಚಿತ್ರ
ಒಡಿಶಾ : ಮದರಸದಲ್ಲಿ 12 ವರ್ಷದ ಬಾಲಕನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ ಆರೋಪದ ಮೇಲೆ ನಯಾಗಢ ಜಿಲ್ಲೆಯ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಈ ಘಟನೆ ಸೆಪ್ಟೆಂಬರ್ 2ರಂದು ನಯಾಗಢ ಜಿಲ್ಲೆಯ ರಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮದರಸಾದಲ್ಲಿ ನಡೆದಿದೆ. ಪೊಲೀಸರು ಈ ಕುರಿತು ಸೆಪ್ಟೆಂಬರ್ 3ರಂದು ಪ್ರಕರಣ ದಾಖಲಿಸಿದ್ದಾರೆ. 12 ರಿಂದ 15 ವರ್ಷ ವಯಸ್ಸಿನ ಐವರು ಆರೋಪಿಗಳನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ ಎಂದು ನಯಾಗಢ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಸ್ ಚಂದ್ರ ಪಾಂಡಾ ತಿಳಿಸಿದ್ದಾರೆ.
"ಮೃತ ಬಾಲಕ ಕಟಕ್ ಜಿಲ್ಲೆಯ ಬದಂಬಾ ಮೂಲದವನು. ಈತ ಕಿರಿಯ ವಿದ್ಯಾರ್ಥಿಗಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸುವುದಾಗಿ ಹಿರಿಯ ವಿದ್ಯಾರ್ಥಿಗಳಿಗೆ ಬೆದರಿಸಿದ್ದಾನೆ. ಕಳೆದ ಆರು ತಿಂಗಳಿನಿಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಮತ್ತು ಆ ಬಳಿಕ ಆತನನ್ನು ಕೊಲೆ ಮಾಡಲಾಗಿದೆ" ಎಂದು ಎಎಸ್‌ಪಿ ತಿಳಿಸಿದ್ದಾರೆ.
ಸೆಪ್ಟಿಕ್ ಟ್ಯಾಂಕ್‌ನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಆರಂಭದಲ್ಲಿ ಆಕಸ್ಮಿಕ ಸಾವಿನಂತೆ ಕಂಡು ಬಂದರೂ ನಂತರ ದೈಹಿಕವಾಗಿ ಚಿತ್ರಹಿಂಸೆ ನೀಡಿರುವುದು ಬಯಲಾಗಿದೆ. ಘಟನೆಗೆ ಸಂಬಂಧಿಸಿ ಐವರನ್ನು ಆರೋಪಿತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ.