Uttarakhand | ಧಾರ್ಮಿಕ ಮೆರವಣಿಗೆ ವೇಳೆ ವಿರೋಧಿ ಗುಂಪುಗಳ ನಡುವೆ ಘರ್ಷಣೆ: ಇಬ್ಬರು ಮೃತ್ಯು
ಸಾಂದರ್ಭಿಕ ಚಿತ್ರ
ಡೆಹ್ರಾಡೂನ್: ಹರಿದ್ವಾರ ಜಿಲ್ಲೆಯ ರೂರ್ಕಿಯ ಭಗವಾನ್‌ಪುರ ಪ್ರದೇಶದಲ್ಲಿ ರವಿವಾರ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ಎರಡು ವಿರೋಧಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು,ಇಬ್ಬರು ಮೃತಪಟ್ಟಿದ್ದಾರೆ ಮತ್ತು ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ಉದ್ವಿಗ್ನತೆಯಿದ್ದು, ಭಾರೀ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬನಾರಸಿ ಗ್ರಾಮದಲ್ಲಿ ಸಂತ ರವಿದಾಸ ಶೋಭಾಯಾತ್ರೆಯ ಅಂಗವಾಗಿ ಮೆರವಣಿಗೆ ನಡೆದಿದ್ದು,ಸಾಮೂಹಿಕ ಭೋಜನದ ವೇಳೆ ಈ ಘಟನೆ ನಡೆದಿದೆ.
ಸಂಜೆ ಐದು ಗಂಟೆಯ ಸುಮಾರಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿರುವ ಎರಡು ಗುಂಪುಗಳ ನಡುವೆ ವಾಗ್ವಾದ ಆರಂಭಗೊಂಡಿತ್ತು. ಶೀಘ್ರವೇ ಅದು ಹಿಂಸೆಗೆ ತಿರುಗಿದ್ದು, ಪಿಸ್ತೂಲುಗಳನ್ನೂ ಬಳಸಲಾಗಿತ್ತು.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಆನಂದ (28) ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ರಾತ್ರಿ ಸಮೀಪದ ಹೊಲವೊಂದರಲ್ಲಿ ಎದುರಾಳಿ ಗುಂಪಿಗೆ ಸೇರಿದ ಮಾಂಗೆರಾಮ್ ಎಂಬಾತನ ಶವ ಪತ್ತೆಯಾಗಿತ್ತು. ಆತನನ್ನು ಥಳಿಸಿ ಕೊಲ್ಲಲಾಗಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ.
ಮೃತ ಆನಂದನ ಕುಟುಂಬ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ರಸ್ತೆಯ ಮಧ್ಯೆ ಶವವನ್ನು ಇರಿಸಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದರು. ಆರೋಪಿಗಳನ್ನು ಬಂಧಿಸುವವರೆಗೂ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಧಾವಿಸಿದ ಹಿರಿಯ ಪೋಲಿಸ್ ಅಧಿಕಾರಿಗಳು ಗುಂಪನ್ನು ಸಮಾಧಾನಗೊಳಿಸಿದ ಬಳಿಕ ತಡಸಂಜೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು.
ಗಾಯಗೊಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.