ಮತಾಂತರ ವಿರೋಧಿ ಕಾಯ್ದೆ ಪ್ರಶ್ನಿಸಿ ಪಿಐಎಲ್: ಕೇಂದ್ರ, ರಾಜ್ಯ ಸರಕಾರಗಳ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ: ಮತಾಂತರ ವಿರೋಧಿ ಕಾನೂನುಗಳನ್ನು ಪ್ರಶ್ನಿಸಿ ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚಸ್ ಇನ್ ಇಂಡಿಯಾ (ಎನ್‌ಸಿಸಿಐ) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರ ಹಾಗೂ ರಾಜಸ್ಥಾನ, ಅರುಣಾಚಲ ಪ್ರದೇಶ ಸೇರಿದಂತೆ 12 ರಾಜ್ಯಗಳ ಪ್ರತಿಕ್ರಿಯೆ ಕೇಳಿದೆ.
ಈ ರಾಜ್ಯಗಳಲ್ಲಿ ಈ ಕಾನೂನುಗಳಿಗೆ ತಡೆ ನೀಡುವಂತೆ ಕೂಡ ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚಸ್ ಇನ್ ಇಂಡಿಯಾ (ಎನ್‌ಸಿಸಿಐ)ವನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ ಕೋರಿದ್ದಾರೆ.
ಎನ್‌ಸಿಸಿಐಯ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠ ಗಮನಕ್ಕೆ ತೆಗೆದುಕೊಂಡಿತು ಹಾಗೂ ಕೇಂದ್ರ ಸರಕಾರ, 12 ರಾಜ್ಯ ಸರಕಾರಗಳಿಂದ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು.
ಹೊಸ ಅರ್ಜಿಯನ್ನು ಬಾಕಿ ಉಳಿದಿರುವ ಅರ್ಜಿಯೊಂದಿಗೆ ಸೇರಿಸುವಂತೆ ಆದೇಶಿಸಿದ ಮುಖ್ಯ ನ್ಯಾಯಮೂರ್ತಿ, ಮೂವರು ಸದಸ್ಯರ ಪೀಠ ಈ ಅರ್ಜಿಗಳನ್ನು ಒಟ್ಟಾಗಿ ಆಲಿಸಲಿದೆ ಎಂದರು.
ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯ ಕಾನೂನನ್ನು ಪ್ರಶ್ನಿಸಿದ ಇದೇ ರೀತಿಯ ಅರ್ಜಿಗಳು ಬಾಕಿ ಇವೆ. ನಮ್ಮ ಪ್ರತಿಕ್ರಿಯೆ ಸಿದ್ಧವಿದೆ. ಶೀಘ್ರದಲ್ಲಿ ಸಲ್ಲಿಸಲಿದ್ದೇವೆ ಎಂದರು.