×
Ad

ಕೌಶಲ ಅಭಿವೃದ್ಧಿ ಪ್ರಕರಣ: ಚಂದ್ರಬಾಬು ನಾಯ್ಡುಗೆ ಈಡಿ ಕ್ಲೀನ್ ಚಿಟ್

Update: 2026-02-02 22:20 IST

 ಚಂದ್ರಬಾಬು ನಾಯ್ಡು | Photo Credit ; PTI 

ಅಮರಾವತಿ: ಕೌಶಲ್ಯ ಅಭಿವೃದ್ಧಿ ನಿಗಮ ಪ್ರಕರಣದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಜಾರಿ ನಿರ್ದೇಶನಾಲಯ (ಈಡಿ) ಕ್ಲೀನ್ ಚಿಟ್ ನೀಡಿದೆ.

ಅಪರಾಧದಲ್ಲಿ ಚಂದ್ರಬಾಬು ನಾಯ್ಡು ಅವರ ಪ್ರತ್ಯಕ್ಷ ಅಥವಾ ಪರೋಕ್ಷ ಪಾತ್ರವಿಲ್ಲ ಎಂದು ಅದು ಹೇಳಿದೆ.

ವಿಶಾಖಪಟ್ಟಣಂನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಜನವರಿ 31ರಂದು ಸಲ್ಲಿಸಲಾದ ಪೂರಕ ಆರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ, ಹಣ ಅಕ್ರಮ ವರ್ಗಾವಣೆಯೊಂದಿಗೆ ನಾಯ್ಡು ಅವರು ನಂಟು ಹೊಂದಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ. ಈ ಪ್ರಕರಣದಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಿಲ್ಲ ಎಂದು ಹೇಳಿದೆ.

ಕೌಶಲ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರದಲ್ಲಿ ನಾಯ್ಡು ಅವರು ಭಾಗಿಯಾಗಿಲ್ಲ ಎಂದು ಈ ಹಿಂದೆ ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಎಪಿ ಸಿಐಡಿ) ಕೂಡ ದೃಢಪಡಿಸಿತ್ತು. ವಿಜಯವಾಡ ಎಸಿಬಿ ನ್ಯಾಯಾಲಯ ಆರೋಪಗಳನ್ನು ಉಳಿಸಿಕೊಳ್ಳಲು ಯಾವುದೇ ಆಧಾರಗಳಿಲ್ಲ ಎಂದು ಪ್ರಕರಣವನ್ನು ಹಿಂಪಡೆಯುಲು ಅನುಮತಿ ನೀಡುವಾಗ ಸ್ಪಷ್ಟಪಡಿಸಿತ್ತು.

ಕೌಶಲ್ಯ ಅಭಿವೃದ್ಧಿ ನಿಗಮ ಪ್ರಕರಣ 2023 ಸೆಪ್ಟಂಬರ್‌ನಲ್ಲಿ ನಾಯ್ಡು ಅವರ ಬಂಧನಕ್ಕೆ ಕಾರಣವಾಗಿತ್ತು. 2023 ಅಕ್ಟೋಬರ್‌ನಲ್ಲಿ ಜಾಮೀನು ಸಿಗುವ ವರೆಗೆ ಅವರು 53 ದಿನಗಳ ಕಾಲ ರಾಜಮುಂಡ್ರಿ ಕೇಂದ್ರ ಕಾರಾಗೃಹದಲ್ಲಿ ಕಳೆದಿದ್ದರು.

ಈ ಪ್ರಕರಣ ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ (ಎಪಿಎಸ್‌ಎಸ್‌ಡಿಸಿ)ದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದೆ. ಇದರಿಂದ ರಾಜ್ಯ ಸರಕಾರಕ್ಕೆ 300 ಕೋಟಿ ರೂ. ಅಧಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News