ಪ್ರಧಾನಿ ಮೋದಿಯ ಪಂಜಾಬ್ ಭೇಟಿಯ ವೇಳೆ ಭದ್ರತಾ ಲೋಪ: ಮತ್ತೆ ಆರು ಪೊಲೀಸ್ ಅಧಿಕಾರಿಗಳ ಅಮಾನತು
Photo: PTI
ಚಂಡೀಗಢ: ಜನವರಿ 2022ರಲ್ಲಿ ಪಂಜಾಬ್ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ಆಗಿದ್ದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಮತ್ತೆ ಆರು ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮುನ್ನ ಅಮಾನತುಗೊಂಡಿದ್ದ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಪೊಲೀಸ್ ಅಧಿಕಾರಿಯೊಬ್ಬರು ಸೇರಿದಂತೆ ಒಟ್ಟು ಏಳು ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತಿನಲ್ಲಿರಿಸಲಾಗಿದೆ.
ನವೆಂಬರ್ 22ರಂದು ಪಂಜಾಬ್ ರಾಜ್ಯ ಗೃಹ ಇಲಾಖೆಯು ಹೊರಡಿಸಿರುವ ಆದೇಶದ ಪ್ರಕಾರ, ಉಪ ಪೊಲೀಸ್ ವರಿಷ್ಠಾಧಿಕಾರಿ ಶ‍್ರೇಣಿಯ ಪಾರ್ಸನ್ ಸಿಂಗ್ ಹಾಗೂ ಜಗದೀಶ್ ಕುಮಾರ್, ಇನ್ಸ್ ಪೆಕ್ಟರ್ ದರ್ಜೆಯ ಜತೀಂದರ್ ಸಿಂಗ್ ಹಾಗೂ ಬಲ್ವಿಂದರ್ ಸಿಂಗ್, ಸಬ್ ಇನ್ಸ್ ಪೆಕ್ಟರ್ ದರ್ಜೆಯ ಜಸ್ವಂತ್ ಸಿಂಗ್ ಹಾಗೂ ಸಹಾಯಕ ಸಬ್ ಇನ್ಸ್ ಪೆಕ್ಟರ್ ದರ್ಜೆಯ ರಮೇಶ್ ಕುಮಾರ್ ಮತ್ತೆ ಅಮಾನತುಗೊಂಡಿರುವ ಆರು ಮಂದಿ ಪೊಲೀಸ್ ಅಧಿಕಾರಿಗಳ ಪೈಕಿ ಸೇರಿದ್ದಾರೆ.
ಬಠಿಂಡಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಗುರ್ಬಿಂದರ್ ಸಿಂಗ್ ಅವರನ್ನು ಶನಿವಾರ ಅಮಾನತುಗೊಳಿಸಲಾಗಿತ್ತು ಎಂದು ವರದಿಯಾಗಿದೆ.
ಆದೇಶದ ಪ್ರಕಾರ, ಪಂಜಾಬ್ ನಾಗರಿಕ ಸೇವೆಗಳು ನಿಯಮ (ಶಿಕ್ಷೆ ಮತ್ತು ಮೇಲ್ಮನವಿ) 1970ರ ಸೆಕ್ಷನ್ 8ರ ಅಡಿ ಅಮಾನತುಗೊಂಡಿರುವ ಎಲ್ಲ ಏಳು ಮಂದಿ ಪೊಲೀಸ್ ಅಧಿಕಾರಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಜನವರಿ 5, 2022ರಂದು ಫಿರೋಝ್ ಪುರ್ ಬಳಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆಯು 20 ನಿಮಿಷಗಳಿಗೂ ಹೆಚ್ಚು ಕಾಲ ಫ್ಲೈ ಓವರ್ ಒಂದರ ಮೇಲೆ ನಿಲ್ಲುವಂತಾಗಿತ್ತು. ಹೀಗಾಗಿ, ಅಂದಿನ ತಮ್ಮ ಯಾವುದೇ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಾಗದ ಪ್ರಧಾನಿ ಮೋದಿ, ತಾವು ಭಾಗವಹಿಸಬೇಕಿದ್ದ ಸಮಾವೇಶವೊಂದನ್ನೂ ರದ್ದುಗೊಳಿಸಬೇಕಾಗಿ ಬಂದಿತ್ತು.