ಮಧ್ಯಪ್ರದೇಶ | ಸರಕಾರಿ ಆಸ್ಪತ್ರೆಯಲ್ಲಿ ಡ್ರಿಪ್ ಬಾಟಲಿ ಹಿಡಿದು ನಿಂತ 72ರ ವೃದ್ಧೆ; ವೀಡಿಯೊ ವೈರಲ್
Photo credit: NDTV
ಸತ್ನಾ (ಮಧ್ಯಪ್ರದೇಶ): ಗಾಯಗೊಂಡಿದ್ದ ತನ್ನ ಮೊಮ್ಮಗನಿಗೆ ಸುಮಾರು ಅರ್ಧ ಗಂಟೆ ಕಾಲ 72 ವರ್ಷದ ವೃದ್ಧೆಯೊಬ್ಬರು ಡ್ರಿಪ್ಸ್ ಬಾಟಲಿ ಹಿಡಿದು ನಿಂತಿದ್ದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭ ಬಾಯಿ ಪಟೇಲ್ ಆಸ್ಪತ್ರೆಯಲ್ಲಿ ನಡೆದಿದೆ. ಈ ವೇಳೆ ಗಾಯಾಳು ಬಾಲಕನಿಗೆ ಡ್ರಿಪ್ಸ್ ಬಾಟಲಿ ಹಾಕಲು ಸ್ಟ್ಯಾಂಡ್ ಒದಗಿಸಿರಲಿಲ್ಲ ಎನ್ನಲಾಗಿದೆ.
ಶುಕ್ರವಾರ ರಸ್ತೆ ಅಪಘಾತಕ್ಕೀಡಾಗಿದ್ದ 35 ವರ್ಷದ ಅಶ್ವನಿ ಮಿಶ್ರಾರನ್ನು ಮೈಹರ್‌ನಿಂದ ಆಸ್ಪತ್ರೆಗೆ ಕರೆ ತಂದಾಗ ಈ ಘಟನೆ ನಡೆದಿದೆ. ಅವರ ಸ್ಥಿತಿ ಗಂಭೀರವಾಗಿದ್ದರೂ, ಅವರಿಗೆ ಯಾವುದೇ ಡ್ರಿಪ್ ಸ್ಟ್ಯಾಂಡ್ ವ್ಯವಸ್ಥೆ ಮಾಡಲಾಗಿಲ್ಲ ಹಾಗೂ ಅವರ ಅಜ್ಜಿ ಡ್ರಿಪ್ಸ್ ಬಾಟಲಿಯನ್ನು ಸುಮಾರು ಅರ್ಧ ಗಂಟೆ ಹಿಡಿದುಕೊಂಡಿದ್ದಾರೆ. ಈ ದೃಶ್ಯಕ್ಕೆ ಆಸ್ಪತ್ರೆಯ ಸಿಬ್ಬಂದಿಗಳು ಮೂಕ ಪ್ರೇಕ್ಷಕರಂತೆ ಸಾಕ್ಷಿಯಾಗಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಸ್ಪತ್ರೆಯಲ್ಲಿ ಡ್ರಿಪ್ಸ್ ಸ್ಟ್ಯಾಂಡ್‌ಗಳ ಯಾವುದೇ ಕೊರತೆ ಇರಲಿಲ್ಲ ಹಾಗೂ ಸಂತ್ರಸ್ತ ಗಾಯಾಳುವಿನೊಂದಿಗೆ ಆಸ್ಪತ್ರೆಯ ಸಿಬ್ಬಂದಿಗಳು ತಾರತಮ್ಯದಿಂದ ವರ್ತಿಸಿದರು ಎಂದು ಆರೋಪಿಸಲಾಗಿದೆ.
ವಯೋವೃದ್ಧ ತಾಯಿಯ ಕಣ್ಣು ಮಂಜಾಗುತ್ತಿದ್ದರೂ, ಆಕೆ ತನ್ನ ಮೊಮ್ಮಗನಿಗೆ ಡ್ರಿಪ್ಸ್ ನೀಡಲು ದೃಢನಿಶ್ಚಯ ಮಾಡಿಕೊಂಡಿದ್ದರು. ಇದರಿಂದ ಸ್ಥಳದಲ್ಲಿದ್ದ ಜನರು ವಿಚಲಿತ ಹಾಗೂ ಕುಪಿತರಾದರು ಎಂದು ವರದಿಯಾಗಿದೆ.
ಆದರೆ, ಈ ಘಟನೆಯನ್ನು ಅಲ್ಲಗಳೆದಿರುವ ಸಿವಿಲ್ ಸರ್ಜನ್ ಮನೋಜ್ ಶುಕ್ಲಾ, "ಸ್ಟ್ಯಾಂಡ್‌ಗಳಿಗೆ ಯಾವುದೇ ಕೊರತೆ ಇರಲಿಲ್ಲ. ರೋಗಿಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆ ತರಲಾಗಿತ್ತು ಹಾಗೂ 5-7 ನಿಮಿಷಗಳೊಳಗೆ ರೋಗಿಗೆ ಚಿಕಿತ್ಸೆ ಒದಗಿಸಲಾಯಿತು. ರೋಗಿಯ ಅಜ್ಜಿಯೇ ಡ್ರಿಪ್ಸ್ ಅನ್ನು ಪಡೆದುಕೊಂಡಿದ್ದರು. ಹೀಗಿದ್ದೂ, ರೋಗಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ" ಎಂದು ಸ್ಪಷ್ಟೀಕರಣ ನೀಡಿದ್ದಾರೆ.