ಕಾಂಗ್ರೆಸ್‌ಗೆ ಮರಳಲು ಮುಂದಾದ ಬಿಜೆಪಿ ಮುಖಂಡನ ಮನೆ ಮೇಲೆ ಎಸಿಬಿ ದಾಳಿ
PC: x.com/IndianExpress
ಜೈಪುರ: ಕಾಂಗ್ರೆಸ್ ಪಕ್ಷಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ ಎರಡೇ ದಿನಗಳಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಮಹೇಂದ್ರಜೀತ್ ಸಿಂಗ್ ಮಾಳವೀಯ ಅವರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ಬ್ಯೂರೊ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಆರೋಪಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮಾಳವೀಯ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಅವರಿಗೆ ಸೇರಿದ ಮೂರು ಆಸ್ತಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಅಶೋಕ್ ಗೆಹ್ಲೋಟ್ ಸಂಪುಟದಲ್ಲಿ ಸಚಿವರಾಗಿದ್ದ ಹಾಗೂ ಬುಡಕಟ್ಟು ಪ್ರದೇಶವಾದ ಬನ್ಸ್ವಾರಾದಿಂದ ಸಂಸದರಾಗಿದ್ದ ಮಾಳವೀಯ ಅವರು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಖಜೀಂದರ್ ಸಿಂಗ್ ರಾಂಡ್ವಾ, ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಹಾಗೂ ವಿರೋಧ ಪಕ್ಷದ ನಾಯಕ ಟಿಕಾರಾಂ ಜುಲ್ಲಿ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರು.
ಆದರೆ ಎಸಿಬಿ ದಾಳಿಯ ಕುರಿತು ಪ್ರತಿಕ್ರಿಯಿಸಲು ಮಾಳವೀಯ ಅವರು ನಿರಾಕರಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಈ ಬೆಳವಣಿಗೆಯನ್ನು ದೃಢಪಡಿಸಿ, ಇದು ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಖಂಡಿಸಿದ್ದಾರೆ. ರಾಜಕೀಯ ದುರುದ್ದೇಶಕ್ಕಾಗಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಇನ್ನೊಂದೆಡೆ, ಎಸಿಬಿ ಅಧಿಕಾರಿಗಳು ಕೂಡ ಈ ವಿಷಯದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬಿಜೆಪಿ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲದ ಕಾರಣ ಕಾಂಗ್ರೆಸ್‌ಗೆ ಮರಳುವುದಾಗಿ ಮಾಳವೀಯ ಅವರು ಇತ್ತೀಚೆಗೆ ಘೋಷಿಸಿದ್ದರು.