×
Ad

ಅಪಹರಣ ಮತ್ತು ಕಿರುಕುಳ ಆರೋಪ: ಬಿಜೆಪಿ ನಾಯಕ, ನಟ ಕೃಷ್ಣಕುಮಾರ್ ಹಾಗೂ ಪುತ್ರಿ ದಿಯಾ ವಿರುದ್ಧ ಪ್ರಕರಣ ದಾಖಲು

Update: 2025-06-08 23:54 IST

ಕೃಷ್ಣಕುಮಾರ್ ಹಾಗೂ ಪುತ್ರಿ ದಿಯಾ Instagram / Krishnakumar

ತಿರುವನಂತಪುರಂ: ಅಪಹರಣ ಮತ್ತು ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಹಾಗೂ ಮಲಯಾಳಂ ನಟ ಕೃಷ್ಣಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ತಿರುವನಂತಪುರಂನ ಮ್ಯೂಸಿಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟ ಕೃಷ್ಣಕುಮಾರ್ ರ ಎರಡನೆ ಪುತ್ರಿ ದಿಯಾ ಮಾಲಕತ್ವದ ಆಭರಣಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮೂವರು ಮಹಿಳಾ ಉದ್ಯೋಗಿಗಳು ದೂರು ದಾಖಲಿಸಿದ್ದಾರೆ. ಈ ನಡುವೆ, ಅದೇ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದ್ದು, ದಿಯಾ ಮಾಲಕತ್ವದ ಆಭರಣಗಳ ಅಂಗಡಿಯಲ್ಲಿ ಕ್ಯೂಆರ್ ಕೋಡ್ ಗಳನ್ನು ಸ್ವ್ಯಾಪ್ ಮಾಡುವ ಮೂಲಕ, ಅವರಿಗೆ 69 ಲಕ್ಷ ರೂ. ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ವರದಿಗಳ ಪ್ರಕಾರ, ಮ್ಯೂಸಿಯಂ ಠಾಣೆ ಪೊಲೀಸರು ಉಭಯ ದೂರದಾರರ ವಿರುದ್ಧವೂ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಕೃಷ್ಣಕುಮಾರ್, “ಪೊಲೀಸ್ ಠಾಣೆಯಲ್ಲಿ ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದ ಈ ಮಹಿಳಾ ಉದ್ಯೋಗಿಗಳ ವಿಡಿಯೊಗಳು ಹಾಗೂ ಸಿಸಿಟಿವಿ ದೃಶ್ಯಾನವಳಿಗಳೂ ಸೇರಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಾಗಿದೆ. ದಿಯಾ ಗರ್ಭಿಣಿಯಾಗಿದ್ದುದರಿಂದ, ಅಂಗಡಿಗೆ ತೆರಳುವುದನ್ನು ನಿಲ್ಲಿಸಿದ್ದಳು. ಈ ವೇಳೆ ಸ್ವ್ಯಾಪಿಂಗ್ ನಡೆದಿದೆ. ಅಂಗಡಿಯ ಕ್ಯೂಆರ್ ಕೋಡ್ ಕೆಟ್ಟು ಹೋಗಿದ್ದು, ನಮ್ಮ ಖಾತೆಗಳಿಗೆ ಹಣವನ್ನು ಪಾವತಿಸಿ ಎಂದು ಈ ಯುವತಿಯರು ಗ್ರಾಹಕರ ಮೇಲೆ ಒತ್ತಡ ಹೇರಿದ್ದಾರೆ. ದಿಯಾ ಸ್ನೇಹಿತೆಯು ಒಮ್ಮೆ ಅಂಗಡಿಯಲ್ಲಿ ವಸ್ತುವೊಂದನ್ನು ಖರೀದಿಸಿದಾಗ ನಮಗೆ ಈ ಸಂಗತಿ ತಿಳಿದು ಬಂದಿತು” ಎಂದು ಹೇಳಿದ್ದಾರೆ.

ನಾವು ʼOh by Ozy’ ಎಂಬ ಅಂಗಡಿಗಾಗಿ ಒಂದು ವರ್ಷ ಕಾಲ ಕೆಲಸ ಮಾಡಿದ್ದೆವು. ಗ್ರಾಹಕರು ಆನ್ ಲೈನ್ ಪಾವತಿಯ ಮೂಲಕ ಹಣವನ್ನು ಕಳಿಸುತ್ತಿದ್ದರು ಹಾಗೂ ನಾವು ಆ ಹಣವನ್ನು ದಿಯಾಗೆ ನಗದಿನ ರೂಪದಲ್ಲಿ ಮರಳಿಸುತ್ತಿದ್ದೆವು. ನಾವು ಬಹುಶಃ ರೂ. 30 ಲಕ್ಷ ಮೊತ್ತವನ್ನು ಸ್ವೀಕರಿಸಿರಬಹುದು. ನಾವು ಆ ಹಣವನ್ನು ವಾರದ ಆಧಾರದಲ್ಲಿ ದಿಯಾಗೆ ಮರಳಿಸಿದ್ದೆವು. ನಾವು ಹಣವನ್ನು ನಗದಿನ ರೂಪದಲ್ಲಿ ಮರಳಿಸಿರುವುದರಿಂದ, ಅದಕ್ಕೆ ನಮ್ಮ ಬಳಿ ಯಾವುದೇ ಸಾಕ್ಷ್ಯಾಧಾರವಿಲ್ಲ” ಎಂದು ದಿಯಾ ಮಾಲಕತ್ವದ ಆಭರಣಗಳ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಯೊಬ್ಬರು ಮಾಧ್ಯಮಗಳ ಬಳಿ ಅಲವತ್ತುಕೊಂಡಿದ್ದಾರೆ.

ನಟ ಕೃಷ್ಣಕುಮಾರ್, ಅವರ ಪತ್ನಿ ಹಾಗೂ ದಿಯಾ ನಮಗೆ ಜಾತಿ ನಿಂದನೆ ಮಾಡಿದ್ದಾರೆ ಎಂದೂ ದೂರು ಆರೋಪಿಸಿದ್ದಾರೆ.

“ಈ ಯುವತಿಯರು ಆರೋಪ ಮಾಡುವುದನ್ನು ಹೊರತುಪಡಿಸಿ, ಮಾಧ್ಯಮ ಅಥವಾ ಪೊಲೀಸರಿಗೆ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸುತ್ತಿಲ್ಲ. ಅವರು ತಮ್ಮ ಆರೋಪಗಳಿಗೆ ಸಾಕ್ಷ್ಯಾಧಾರ ಒದಗಿಸಿದರೆ ಮಾತ್ರ, ನಾವು ಅವರ ಆರೋಪಗಳನ್ನು ಪರಿಶೀಲಿಸಬಹುದು” ಎಂದು ದಿಯಾ ಮಾಧ್ಯಮಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

ಅಲ್ಲದೆ, ಅಪಹರಣ ಆರೋಪವನ್ನು ತಳ್ಳಿ ಹಾಕಿದ ದಿಯಾ, ನಾನು ನನ್ನ ಸಹೋದರಿ ಅಹಾನಾ ಹಾಗೂ ತಾಯಿಯ ಜೊತೆ ಅವರೊಂದಿಗೆ ನನ್ನ ಫ್ಲ್ಯಾಟ್ ನಿಂದ ನನ್ನ ತಂದೆಯ ಕಚೇರಿಗೆ ಮಾತ್ರ ತೆರಳಿದ್ದೆವು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. “ನಾವು ಈ ವಂಚನೆಯ ಕುರಿತು ಅವರನ್ನು ಪ್ರಶ್ನಿಸಿದಾಗ, ಅವರು ತಮ್ಮ ಅಪರಾಧವನ್ನು ಒಪ್ಪಿಕೊಂಡು ಹಣವನ್ನು ಮರಳಿಸುವ ಭರವಸೆ ನೀಡಿದ್ದರು. ನಾವು ಈ ವಿಷಯದ ಕುರಿತು ನಮ್ಮ ಫ್ಲ್ಯಾಟ್ ನಲ್ಲಿ ಮಾತನಾಡುತ್ತಿದ್ದುದರಿಂದ, ಅಪಾರ್ಟ್ ಮೆಂಟ್ ಸಂಘದ ಅಧ್ಯಕ್ಷರು ನಮಗೆ ಬೇರೆಡೆಗೆ ತೆರಳುವಂತೆ ಸೂಚಿಸಿದರು. ಹೀಗಾಗಿ ನಾವು ನಮ್ಮ ತಂದೆಯ ಕಚೇರಿಗೆ ತೆರಳಿದೆವು. ಇಬ್ಬರು ಉದ್ಯೋಗಿಗಳು ನಮ್ಮ ಸಹೋದರಿಯೊಂದಿಗೆ ಹಾಗೂ ಓರ್ವ ಉದ್ಯೋಗಿ ನನ್ನ ತಾಯಿಯೊಂದಿಗೆ ಪ್ರಯಾಣಿಸಿದ್ದರು. ಅವರ ಪತಿಯಂದಿರು ತಮ್ಮ ಬೈಕ್ ಗಳಲ್ಲಿ ನಮ್ಮನ್ನು ಹಿಂಬಾಲಿಸಿದ್ದರು” ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News